ADVERTISEMENT

ವೇಮಗಲ್ | ಶಿಥಿಲ ಶಾಲೆ: ಭಯದಲ್ಲೇ ಶಾಲೆಗೆ ಬರುವ ಶಿಕ್ಷಕರು, ಮಕ್ಕಳು

ಪ್ರಜಾವಾಣಿ ವಿಶೇಷ
Published 28 ಜೂನ್ 2024, 5:52 IST
Last Updated 28 ಜೂನ್ 2024, 5:52 IST
ಶೆಟ್ಟಿಹಳ್ಳಿ ಪ್ರಾಥಮಿಕ ಶಾಲಾ ಕೊಠಡಿಯ ಮೇಲ್ಚಾವಣಿಯ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಕಾಣುತ್ತಿವೆ
ಶೆಟ್ಟಿಹಳ್ಳಿ ಪ್ರಾಥಮಿಕ ಶಾಲಾ ಕೊಠಡಿಯ ಮೇಲ್ಚಾವಣಿಯ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಕಾಣುತ್ತಿವೆ   

ವೇಮಗಲ್: ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆಗಳು, ಕಬ್ಬಿಣದ ಸರಳು ಗೋಚರಿಸುವ ಮೇಲ್ಚಾವಣಿ. ಮಳೆ ಬಂದರೆ ಸಾಕು ಸೋರುವ, ಕಟ್ಟಡದ ಮೇಲ್ಭಾಗದ ಸಿಮೆಂಟ್ ಯಾವಾಗ ಬೀಳುವುದೋ ಎಂಬ ಅಂಜಿಕೆಯಲ್ಲೇ ಶಾಲೆಗೆ ಬರುವ ಮಕ್ಕಳು, ಶಿಕ್ಷಕರು.

–ಇದು ವೇಮಗಲ್ ಹೋಬಳಿಯ ಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಮೇಡಿಹಾಳದ ಸರ್ಕಾರಿ ಪ್ರೌಢಶಾಲಾ  ಕಟ್ಟಡಗಳ ಶೋಚನೀಯ ಸ್ಥಿತಿ.

60ರ ದಶಕದ ಕಟ್ಟಡ: ಶೆಟ್ಟಿಹಳ್ಳಿ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನೆಯಾಗಿದ್ದು 1962ರಲ್ಲಿ. ಅಂದಿನ ಕಂದಾಯ ಸಚಿವ ಎಂ.ಬಿ. ಕೃಷ್ಣಪ್ಪ ಅವರಿಂದ ಉದ್ಘಾಟನೆಯಾಗಿರುವ ಈ ಶಾಲೆಯ ಮೇಲ್ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದೆ. ಇರುವ ಐದು ಕೊಠಡಿಗಳ ಸ್ಥಿತಿ ಅಧೋಗತಿಗೆ ತಲುಪಿದೆ. ಮಳೆ ಬಂದರೆ ಎಲ್ಲಾ ಕೊಠಡಿಗಳಲ್ಲಿ ನೀರು ಸುರಿಯುತ್ತದೆ. ತರಗತಿ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು ಬೀಳುವ ಸ್ಥಿತಿಯನ್ನು ತಲುಪಿದೆ. ಮಳೆಯಿಂದ ಬಿದ್ದ ನೀರು ಕಟ್ಟಡ ಮೇಲ್ಭಾಗದಲ್ಲಿ ಸೂಕ್ತವಾಗಿ ಹೊರಹೋಗದೆ, ಅಲ್ಲಿಯೇ ನಿಂತು ಕಟ್ಟಡದ ಒಳಗೆ ಸೋರಿಕೆಯಾಗುತ್ತದೆ. ನೀರು ನಿಲ್ಲುವುದರಿಂದ ಕಟ್ಟಡದ ಸುತ್ತಲೂ ಪಾಚಿ ಬೆಳೆದಿದೆ.

ADVERTISEMENT

ಮೇಡಿಹಾಳದ ಸರ್ಕಾರಿ ಪ್ರೌಢಶಾಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.  ಕೆಲವೇ ವರ್ಷಗಳ ಹಿಂದೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಈ ಶಾಲೆ ಫಲಿತಾಂಶದಲ್ಲಿಯೂ ಹೆಸರು ಮಾಡಿತ್ತು. ಆದರೆ ಈಗ ಕೇವಲ 76 ವಿದ್ಯಾರ್ಥಿಗಳಿದ್ದಾರೆ.

ಸರಿಯಾದ ಕೊಠಡಿಗಳಿಲ್ಲದೆ ಶಾಲೆಯ ಗೇಟಿನ ಬಳಿ ವಿಜ್ಞಾನ ಪ್ರಯೋಗಾಲಯ ಹಾಗೂ ಒಂದು ಬಾಗಿಲೇ ಇರದ ತರಗತಿ ಕೊಠಡಿ ಇದೆ. ಉಳಿದ ತರಗತಿ ಕೊಠಡಿಗಳು 50 ಮೀಟರ್ ದೂರದಲ್ಲಿದ್ದು, ಈ ಕೊಠಡಿಗಳಲ್ಲಿ ಮೂರು ಕೊಠಡಿಗಳ ಸ್ಥಿತಿ ಯಾವಾಗ ಕುಸಿಯುವುದೋ ಎಂಬ ಸ್ಥಿತಿಯಲ್ಲಿದೆ. ಈ ಶಾಲೆಗೆ ಕಾಂಪೌಂಡ್ ಇಲ್ಲದೆ ಇರುವುದರಿಂದ ಪೋಷಕರು ಹೆಣ್ಣು ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಶಾಲೆಯ ಬಿರುಕು ಬಿಟ್ಟ ಕಟ್ಟಡದ ಗೋಡೆ ಸಂಧಿಯಲ್ಲಿ ಹಾವು ಸೇರಿಕೊಂಡು ಭಯ ಹುಟ್ಟಿಸಿದ ಪ್ರಸಂಗಗಳೂ ನಡೆದವಿ. ಶಾಲೆ ಸುತ್ತಲೂ, ಸ್ವಚ್ಛತೆ ಇಲ್ಲದೆ, ಗಿಡಗಂಟಿಗಳು ಬೆಳೆದು ವಿಷಜೀವಿಗಳ ಅವಾಸ ಸ್ಥಾನವಾಗಿದೆ.

ಇನ್ನಾದರೂ ಸಂಬಂಧಿಸಿದವರು ನಮ್ಮ ಗ್ರಾಮಗಳ ಶಾಲೆಗಳಿಗೆ ಸೂಕ್ತ ಕಟ್ಟಡ ಕಟ್ಟಿಸಿ, ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಎರಡೂ ಗ್ರಾಮಸ್ಥರ ಒಕ್ಕೊರಲ ಬೇಡಿಕೆಯಾಗಿದೆ.

ಶೆಟ್ಟಿಹಳ್ಳಿ ಪ್ರಾಥಮಿಕ ಶಾಲಾ ಕೊಠಡಿಯ ಮೇಲ್ಚಾವಣಿಯ ದುಃಸ್ಥಿತಿ
ಮೇಡಿಹಾಳ ಸರ್ಕಾರಿ ಪ್ರೌಢಶಾಲೆಯ ಕೊಠಡಿ ಬಿರುಕು ಬಿಟ್ಟಿದ್ದು ಬೀಳುವ ಸ್ಥಿತಿಯಲ್ಲಿವೆ

ಶಾಲಾ ಕೊಠಡಿಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಇದರ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.

– ಕನ್ನಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೋಲಾರ ತಾಲ್ಲೂಕು

ಶಾಲೆಯಲ್ಲಿ ಎರಡು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು ಇಲ್ಲಿ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಶಿಥಿಲವಾದ ಕೊಠಡಿಗಳನ್ನು ಸರಿಪಡಿಸಲು ಮನವಿ ಮಾಡಿದ್ದೇವೆ.

–ವೆಂಕಟೇಶ್ ಶಿಕ್ಷಕ ಸರ್ಕಾರಿ ಪ್ರೌಢಶಾಲೆ ಮೇಡಿಹಾಳ

ಶಿಥಿಲಗೊಂಡ ಶಾಲೆಯ ಕೊಠಡಿಗಳ ಕುರಿತು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಈಗಾಗಲೇ ಹಳೆ ವಿದ್ಯಾರ್ಥಿಗಳ ಸಂಘದಿಂದ ಎರಡ್ಮೂರು ಕೊಠಡಿಗಳನ್ನು ರಿಪೇರಿ ಮಾಡಿಸಲಾಗಿದೆ. ಸರ್ಕಾರ ಉಳಿದ ಕೊಠಡಿಗಳ ರಿಪೇರಿಗೆ ಮುಂದಾಬೇಕಿದೆ.

– ಮುನಿಅಂಜಿನಪ್ಪ ಗ್ರಾಮಸ್ಥ ಮೇಡಿಹಾಳ

ತರಗತಿಗಳನ್ನು ನಡೆಸಲಾಗದಷ್ಟು ಶಾಲಾ ಕೊಠಡಿಗಳು ಶಿಥಿಲವಾಗಿವೆ. ಶಾಲಾ ಸುತ್ತಲೂ ಕಾಂಪೌಂಡ್ ಇಲ್ಲದಿರುವುದರಿಂದ ಪೋಷಕರು ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದಾರೆ.

– ಮಂಜುನಾಥ್ ಎಸ್‌ಡಿಎಂಸಿ ಸದಸ್ಯ ಸರ್ಕಾರಿ ಪ್ರೌಢಶಾಲೆ ಮೇಡಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.