ADVERTISEMENT

ಮಾನಸಿಕ ಅಸ್ವಸ್ಥರಿಗೆ ಹಿಂಸೆ ನೀಡುವುದು ಅಪರಾಧ: ನ್ಯಾಯಾಧೀಶ ಪವನೇಶ್

ಮಾನವೀಯ ನೆಲಗಟ್ಟಿನಲ್ಲಿ ಕಾಣಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 14:09 IST
Last Updated 30 ಮಾರ್ಚ್ 2022, 14:09 IST

ಕೋಲಾರ: ‘ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಹಿಂಸೆ ನೀಡುವುದು ಅಥವಾ ಅವರನ್ನು ಕೀಳಾಗಿ ಕಾಣುವುದು ಕಾನೂನು ರೀತಿ ಅಪರಾಧ, ಮಾನವೀಯ ನೆಲಗಟ್ಟಿನಲ್ಲಿ ಅವರ ಮನಸ್ಥಿತಿ ಬದಲಾವಣೆಗೆ ಪ್ರಯತ್ನ ಮಾಡಬೇಕು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್ ಸಲಹೆ ನೀಡಿದರು.

ಮಾನಸಿಕ ಆರೋಗ್ಯ ಕಾಯ್ದೆ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜೀವನಕ್ಕೆ ನೆಲೆ-ಬೆಲೆ ನೀಡುವ ಮಾನಸಿಕ ಆರೋಗ್ಯ ಅತ್ಯಗತ್ಯವಾಗಿದ್ದು, ಸದೃಢ ಬದುಕು ಕಟ್ಟಿಕೊಳ್ಳಲು ಮುಖ್ಯವಾಗಿದೆ. ಮಾನಸಿಕ ಅನಾರೋಗ್ಯಕ್ಕೆ ವಯಸ್ಸಿನ ಭೇದವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿವಿಧ ಕಾರಣಕ್ಕೆ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿರುವರನ್ನು ರಕ್ಷಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಮಾನಸಿಕ ರೋಗವೆಂದರೆ ಹುಚ್ಚು ಅಥವಾ ಕಾಯಿಲೆಯೆಂದು ಆತಂಕಪಡಬೇಕಿಲ್ಲ. ಸಮಸ್ಯೆ ಎಂದು ಪರಿಗಣಿಸಿ ಸೂಕ್ತ ಚಿಕಿತ್ಸೆ ಪಡೆದು ಹೊರಬರಲು ಪ್ರಯತ್ನಿಸಬೇಕು. ಮಾನಸಿಕ ಅಸ್ವಸ್ಥರು ಕಂಡುಬಂದರೆ ಅಂತಹವರನ್ನು ಗುರುತಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಒಪ್ಪಿಸಬೇಕು’ ಎಂದು ತಿಳಿಸಿದರು.‌

‘ಮಾನಸಿಕ ಅಸ್ವಸ್ಥರನ್ನು ಪ್ರೀತಿಯಿಂದ ಕಾಣಬೇಕು. ಅವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕುಟುಂಬ ವರ್ಗದ ಜತೆಗೆ ಸಮಾಜವೂ ನೆರವಾಗಬೇಕು. ಮಾನಸಿಕ ಅಸ್ವಸ್ಥರಿಗೆ ಉಚಿತ ಆರೋಗ್ಯ ಸೇವೆಯ ಸೌಲಭ್ಯವಿದೆ.ಅವರಿಗೆ ಅನ್ಯಾಯವಾದರೆ ಪ್ರಶ್ನಿಸಲು ಅವಕಾಶಗಳಿದ್ದು, ಸಂಘ ಸಂಸ್ಥೆಗಳು ಇಂತಹ ಅಸ್ವಸ್ಥರ ನೆರವಿಗೆ ನಿಲ್ಲಬೇಕು’ ಎಂದು ಮನವಿ ಮಾಡಿದರು.

ನೆರವಿಗೆ ಧಾವಿಸಿ: ‘ದೈಹಿಕ ಅಸ್ವಸ್ಥತೆಗೆ ಔಷಧ, ಚಿಕಿತ್ಸೆ ಶೀಘ್ರ ಸಿಗುತ್ತದೆ. ಅವರಿಗೆ ಆಸ್ಪತ್ರೆಗೆ ಹೋಗಬೇಕೆಂಬ ಅರಿವು ಇರುತ್ತದೆ. ಆದರೆ, ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಪಡೆದುಕೊಳ್ಳಬೇಕೆಂಬ ಅರಿವು ಇರುವುದಿಲ್ಲ. ಸಮಾಜ, ಸಮುದಾಯ ಅವರ ನೆರವಿಗೆ ಧಾವಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳಿದರು.

‘ದೇಹ ಮತ್ತು ಮನಸ್ಸು ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ಆರೋಗ್ಯವಾಗಿದ್ದಾಗ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ. ಮಾನಸಿಕ ಅಸ್ವಸ್ಥರು ಇಲಾಖೆ ಗಮನಕ್ಕೆ ಬಂದರೆ ಸಿಬ್ಬಂದಿಯು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಮಾನಸಿಕ ಅಸ್ವಸ್ಥರ ರಕ್ಷಣೆಗೆ ಸರ್ಕಾರ ಕಾನೂನು ಜಾರಿಗೆ ತಂದಿದೆ. ಇಂತಹ ವ್ಯಕ್ತಿಗಳಿಗೆ ಕಾನೂನು ಸಹಾಯ ಯೋಜನೆ ಇದ್ದು, ಸದುಪಯೋಗ ಪಡೆಯಬೇಕು. ಮಾನಸಿಕ ಅಸ್ವಸ್ಥರಿಗೆ ಕಾನೂನು ಸೌಲಭ್ಯ ಒದಗಿಸಲು ಸಂಘ ಸಂಸ್ಥೆಗಳು ನೇತೃತ್ವ ವಹಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಮನವಿ ಮಾಡಿದರು.

‌ಮನೋ ವೈದ್ಯರಾದ ಡಾ.ವಿಜೇತಾ ದಾಸ್, ಡಾ.ಶ್ರೀನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.