ADVERTISEMENT

ಕೋಲಾರ: ಮತ ಎಣಿಕೆ ಕೇಂದ್ರದ ಸಿದ್ಧತೆ ಪರಿಶೀಲನೆ, ಶಾಂತಿ–ಸುವ್ಯವಸ್ಥೆಗೆ ಡಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 14:05 IST
Last Updated 21 ಮೇ 2019, 14:05 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಮಂಗಳವಾರ ಲೋಕಸಭಾ ಚುನಾವಣಾ ಮತ ಎಣಿಕೆ ಕೇಂದ್ರದಲ್ಲಿನ ಸಿದ್ಧತೆ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಮಂಗಳವಾರ ಲೋಕಸಭಾ ಚುನಾವಣಾ ಮತ ಎಣಿಕೆ ಕೇಂದ್ರದಲ್ಲಿನ ಸಿದ್ಧತೆ ಪರಿಶೀಲಿಸಿದರು.   

ಅಂಕಿ ಅಂಶ.....
* 12 ಕೊಠಡಿಗಳಲ್ಲಿ ಮತ ಎಣಿಕೆ
* 108 ಟೇಬಲ್‌ ವ್ಯವಸ್ಥೆ
* 600 ಮಂದಿ ಎಜೆಂಟರು
* 1,000 ಪೊಲೀಸರ ನಿಯೋಜನೆ

ಕೋಲಾರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ (ಮೇ 23) ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಎಣಿಕೆ ಕೇಂದ್ರದಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಂಗಳವಾರ ಪರಿಶೀಲಿಸಿದರು.

ಮತ ಎಣಿಕೆ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯು ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಜತೆಗೆ ಕೇಂದ್ರದ ಸುತ್ತಲಿನ ಪೊಲೀಸ್‌ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ ಸಾರ್ವಜನಿರು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಹಕಾರದಿಂದಾಗಿ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರು ಮತ ಎಣಿಕೆ ಸಂದರ್ಭದಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡಬೇಕು’ ಎಂದು ಮನವಿ ಮಾಡಿದರು.

‘ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಎಣಿಕೆ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅಭ್ಯರ್ಥಿಗಳ ಎಜೆಂಟರಿಗೂ ಮಾಹಿತಿ ನೀಡಲಾಗಿದೆ. ಎಣಿಕೆ ಸುಸುತ್ರವಾಗಿ ನಡೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು.

ಮತಗಳ ತಾಳೆ: ‘ಮತ ಎಣಿಕೆ ದಿನದಂದು ಅಧಿಕಾರಿಗಳು, ಸಿಬ್ಬಂದಿ ಬೆಳಿಗ್ಗೆ 5.30ಕ್ಕೆ ಕೇಂದ್ರದಲ್ಲಿ ಹಾಜರಿರಬೇಕು. ಬೆಳಗಿನ ಉಪಾಹಾರ ಮುಗಿದ ನಂತರ ಮೊದಲು 8 ಗಂಟೆಗೆ ಅಂಚೆ ಮತಗಳ ಎಣಿಕೆ ನಡೆಯುತ್ತದೆ. ಬಳಿಕ 8.30ಕ್ಕೆ ವಿದ್ಯುನ್ಮಾನ ಮತ ಯಂತ್ರಗಳಲ್ಲಿನ (ಇವಿಎಂ) ಮತಗಳ ಎಣಿಕೆ ನಡೆಯುತ್ತದೆ’ ಎಂದು ವಿವರಿಸಿದರು.

‘ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತ ಖಾತ್ರಿ ಉಪಕರಣಗಳಲ್ಲಿನ (ವಿ.ವಿ ಪ್ಯಾಟ್) ಮತದ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ. ನಂತರ ಇವಿಎಂ ಹಾಗೂ ವಿ.ವಿ ಪ್ಯಾಟ್‌ ಉಪಕರಣದ ಮತಗಳ ಸಂಖ್ಯೆಯನ್ನು ತಾಳೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ನಿಷೇಧಾಜ್ಞೆ ಜಾರಿ: ‘ಮತ ಎಣಿಕೆ ಕೇಂದ್ರದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಮೇ 22ರ ಸಂಜೆಯಿಂದ ಮೇ 23ರ ಮಧ್ಯ ರಾತ್ರಿವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಮದ್ಯದಂಗಡಿಗಳನ್ನು ಬಂದ್‌ ಮಾಡಬೇಕು’ ಎಂದು ಸೂಚಿಸಿದರು.

700 ಸಿಬ್ಬಂದಿ: ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 12 ಕೊಠಡಿಗಳಲ್ಲಿ ಮತ ಎಣಿಕೆಗೆ 108 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. 700 ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಈ ಪೈಕಿ 500 ಅಧಿಕಾರಿಗಳು, 200 ಸಹಾಯಕರು ಹಾಗೂ 1,000 ಪೊಲೀಸರು ಸೇರಿದ್ದಾರೆ. ಜತೆಗೆ 600 ಮಂದಿ ಎಜೆಂಟರು ಹಾಜರಿರುತ್ತಾರೆ. ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಎಣಿಕೆ ಕೇಂದ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ’ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಕ್ಷೇತ್ರಗಳ ಮತ ಎಣಿಕೆಗೆ ತಲಾ 12 ಟೇಬಲ್‌ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಕೆಜಿಎಫ್, ಕೋಲಾರ ಕ್ಷೇತ್ರಗಳ ಮತ ಎಣಿಕೆಗೆ ತಲಾ 14 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಇಬ್ಬರು ವೀಕ್ಷಕರಿರುತ್ತಾರೆ’ ಎಂದು ವಿವರಿಸಿದರು.

ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹಾಗೂ ಚುನಾವಣಾ ಶಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.