ADVERTISEMENT

ವಕ್ಫ್ ವಿವಾದ | ಲವ್ ಜಿಹಾದ್ ಆಯಿತು, ಈಗ ಲ್ಯಾಂಡ್ ಜಿಹಾದ್: ಅಶೋಕ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 10:19 IST
Last Updated 4 ನವೆಂಬರ್ 2024, 10:19 IST
   

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರವು ರೈತರು, ದೇವಾಲಯ, ಶಾಲೆ ಹಾಗೂ ಮಠಗಳ ಆಸ್ತಿಗಳನ್ನು ವಕ್ಫ್ ಬೋರ್ಡ್‍ಗೆ ನೀಡುತ್ತಿದೆ ಎಂದು ಆರೋಪಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅಶೋಕ, ‘ಸಿದ್ರಾಮುಲ್ಲಾ ಖಾನ್‌ ಬಂದ ಮೇಲೆ ಲವ್‌ ಜಿಹಾದ್‌ ನಡೆದು ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ’ ಎಂದು ದೂರಿದರು.

‘ಸಿದ್ದರಾಮಯ್ಯ ಇರುವವರೆಗೆ ಕರ್ನಾಟಕ ಉದ್ಧಾರ ಆಗಲ್ಲ. ಮುಸ್ಲಿಮರ ಅಭಿವೃದ್ಧಿ ಮಾತ್ರ ಆಗುತ್ತದೆ. ಅವರು ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮತ ಓಲೈಕೆಗಾಗಿ ರಾಜ್ಯವನ್ನು ಮಿನಿ ಪಾಕಿಸ್ತಾನ ಮಾಡಲು ಬಿಡಬಾರದು. ಇದು ನಮ್ಮ ರಾಜ್ಯ, ಅಂಬೇಡ್ಕರ್ ಸಂವಿಧಾನ ಬೇಕಾದವರು ಮಾತ್ರ ಕರ್ನಾಟಕದಲ್ಲಿ ಇರಲಿ. ಷರಿಯತ್ ಬೇಕಾದವರು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಹೋಗಲಿ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕೋಲಾರದ ಸಂಗೊಂಡಹಳ್ಳಿ ಗಣೇಶ ದೇಗುಲವನ್ನೇ ವಕ್ಫ್‌ಗೆ ಸೇರಿಸಿದರೆ ಬೇರೆ ದೇಗುಲದ ಕಥೆ ಏನು? ಮಾರಿಯಮ್ಮನ ಗುಡಿ‌ಯನ್ನು ಮುಮ್ತಾಜ್ ಗುಡಿ‌ ಮಾಡುತ್ತಾರೆ. ಕಾಲಂ ನಂಬರ್ 11 ರಲ್ಲಿ ತಿದ್ದುಪಡಿ ಆಗುವವರೆಗೆ ನಮ್ಮ ಹೋರಾಟ ನಿಲ್ಲಲ್ಲ. ಪ್ರಾಣ ಕೊಟ್ಟಾದರೂ ಉಳಿಸುತ್ತೇವೆ. ದೇವಾಲಯ, ರೈತರು, ಹಿಂದೂ ಸ್ಮಶಾನದ ಜಾಗ ಉಳಿಯಬೇಕು. ಅನ್ನ ಕೊಡುವವನಿಗೇ ಕನ್ನ ಹಾಕಿದ್ದೀರಾ’ ಎಂದು ಪ್ರಶ್ನಿಸಿದರು.

‘ಯಾರದ್ದಾದರೂ ಜಮೀನು ಇದ್ದರೆ ಹೆಣ ಹೂಳಿ ಹಸಿರು ಬಾವುಟ ಕಟ್ಟಿ ವಕ್ಫ್ ಬೋರ್ಡ್ ಜಾಗ ಎನ್ನುತ್ತಿದ್ದಾರೆ. ಹಿಂದೂ ಸ್ಮಶಾನ, ಸರ್ಕಾರಿ ಶಾಲೆ, ಮಠ, ರೈತರ ಜಾಗವನ್ನು ವಕ್ಫ್‌ಗೆ ಸೇರ್ಪಡೆ ಮಾಡುವ ಕೆಲಸ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿದೆ. ತಾತ, ಮುತ್ತಾತನ ಕಾಲದಿಂದ ಉಳುಮೆ ಮಾಡಿದ ರೈತರ ಆಸ್ತಿಯೂ ವಕ್ಫ್‌ ಪಾಲಾಗುತ್ತಿದೆ. ಅದು ವಕ್ಫ್ ಬೋರ್ಡ್ ಅಲ್ಲ; ಸಾಬರ ಬೋರ್ಡ್’ ಎಂದು ದೂರಿದರು.

‘ರೈತರ ನೋಟಿಸ್ ವಾಪಸ್ ಪಡೆದಿದ್ದಾರೆಯೇ ಹೊರತು ಪ್ರಕರಣವನ್ನಲ್ಲ. ಸಿದ್ದರಾಮಯ್ಯ ಅವರನ್ನು ಯಾರೂ ನಂಬಬೇಡಿ. ಮಸೀದಿಗೆ ಹೋದರೆ ಟೋಪಿ ಹಾಕಿಕೊಳ್ಳುತ್ತಾರೆ. ನಮ್ಮ ಮುಂದೆ ತೆಗೆದು ಹಾಕುತ್ತಾರೆ. ಪಹಣಿಗಳನ್ನು ಮತ್ತೆ ಪರಿಶೀಲಿಸಿಕೊಳ್ಳಿ’ ಎಂದರು.

‘ಮುಖ್ಯಮಂತ್ರಿ ಸೂಚನೆ ನೀಡಿದ್ದು, ವಕ್ಫ್ ಬೋರ್ಡ್ ಆಸ್ತಿ ಎಂದು ತಿದ್ದುಪಡಿ ಮಾಡಿ ರೈತರನ್ನು ಹೊರಗೆ ಹಾಕಿ ಎಂಬುದಾಗಿ ಸಚಿವ ಜಮೀರ್ ಅಹಮದ್ ಖಾನ್ ಹೇಳುತ್ತಿದ್ದಾರೆ. ಈಗ ಸಿದ್ದರಾಮಯ್ಯ ಅವರನ್ನು ವಿಧಾನಸೌಧದರಿಂದ ಹೊರಗೆ ಹಾಕಲು ಈಗ ಕಾಲ ಬಂದಿದೆ. ಅವರನ್ನು ಪಾಕಿಸ್ತಾನಕ್ಕೆ ತರಬೇತಿಗೆ ಕಳುಹಿಸಬೇಕು. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಕಾಂಗ್ರೆಸ್‌ನವರಿಗೆ ಅಲ್ಲಿರಲು ನೈತಿಕವಾಗಿ ಅಧಿಕಾರ ಇಲ್ಲ’ ಎಂದು ಹರಿಹಾಯ್ದರು.

‘ಕೆಲವರು ನಗರ ನಕ್ಸಲರು ಇದ್ದಾರೆ. ತಾವೇ ಸಂವಿಧಾನ ರಕ್ಷಕರು ಎನ್ನುತ್ತಾರೆ. ಆದರೆ ಮಾಡುವುದೆಲ್ಲಾ ಅನಾಚಾರ’ ಎಂದರು.

‘ವಕ್ಫ್ ಬೋರ್ಡ್ ಎಂಬ ಬೆಂಕಿ ರಾಕ್ಷಸ, ಭೂತ ರಾಜ್ಯಕ್ಕೆ ಬಂದಿದ್ದು, ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಊಟ, ಬಟ್ಟೆ ನೀಡುತ್ತಿದೆ. ಮನೆಮನೆಯಿಂದ ಜನರು ಹೋರಾಟಕ್ಕೆ ಬಂದು ಛಡಿ ಏಟನ್ನು ನೀಡಿ ಭೂತ ಓಡಿಸಿ ಬುದ್ಧಿ‌ ಕಲಿಸಬೇಕು’ ಎಂದು ಕರೆ ನೀಡಿದರು.

‘ಸರ್ಕಾರದ ಮಾತು ಕೇಳಿಗೆ ವಕ್ಫ್‌ಗೆ ಜಾಗ ಬರೆದರೆ ಮುಂದೆ ತಮಗೆ ಶಿಕ್ಷೆ ಕಟ್ಟಿಟ್ಟಬುತ್ತಿ’ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಗೃಹ ಸಚಿವ, ಕೇಂದ್ರ ವಕ್ಫ್ ಮಂಡಳಿಗೂ ಪತ್ರ ಬರೆದು ನ್ಯಾಯಕ್ಕೆ ಆಗ್ರಹಿಸುತ್ತೇನೆ. ವಕ್ಫ್ ಬೋರ್ಡ್‌ ಅನ್ನೇ ವಜಾ ಮಾಡಿಬಿಡಲಿ. ಅವರು ರಾಕ್ಷಸರು, ಲೂಟಿಕೋರರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.