ಕೆಜಿಎಫ್: ಸಮುದ್ರ ಮಟ್ಟಕ್ಕಿಂತಲೂ ಆಳವಾಗಿರುವ ಚಿನ್ನದ ಗಣಿಗಳಲ್ಲಿ ನೀರಿನ ಕೊರತೆ ಇಲ್ಲ ಎಂಬುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ನಗರದ ಬಾಲ್ಘಾಟ್ ಪ್ರದೇಶದ ಗಂಗಮ್ಮ ಶಾಫ್ಟ್ ಬಳಿ ಭೂಮಿಯಿಂದ ನೀರು ಉಕ್ಕಿ ಹರಿಯುತ್ತಿದೆ.
ಚಿನ್ನದ ಗಣಿ ಮುಚ್ಚಿದ ಶಾಫ್ಟ್ ಬಳಿ ಇರುವ ಸಿಂಕ್‌ನಿಂದ ನೀರು ಒಂದೇ ಸಮನೆ ಉಕ್ಕಿ ಹರಿಯುತ್ತಿದೆ. ಕಾಲುವೆ ಸೃಷ್ಟಿಸಿಕೊಂಡು ಹರಿದುಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುವುದರಿಂದ ನೀರಿನ ರಭಸ ಹೆಚ್ಚಾಗಿದೆ. ಚಿನ್ನದ ಗಣಿಯೊಳಗೆ ಸಂಪರ್ಕವಿರುವ ಸಿಂಕ್ ತುಂಬಿ ಒಂದೇ ಸಮನೆ ಹರಿಯುತ್ತಿದೆ. ನೀರಿನ ಹರಿವಿನ ಶಬ್ಧ ಬಹಳ ದೂರದವರೆಗೂ ಕೇಳಿ ಬರುತ್ತಿದೆ.
ಹರಿದು ಬರುತ್ತಿರುವ ನೀರಿನಲ್ಲಿ ತ್ಯಾಜ್ಯ ಮಿಶ್ರಿತವಾಗಿರುವುದರಿಂದ ದುರ್ವಾಸನೆ ಬರುತ್ತಿದೆ. ಬಿಳುಪಾದ ನೀರಿನಲ್ಲಿ ಸೋಪಿನ ಗುಳ್ಳೆಗಳಂತೆ ಹಸಿರು ಪಾಚಿ ಕಾಣುತ್ತಿದೆ. ಸಿಂಕ್ ಆಳ ಎಷ್ಟು ಸಾವಿರ ಅಡಿ ಎಂದು ನಿಖರವಾಗಿ ತಿಳಿದು ಬಂದಿಲ್ಲ.
ಬಾಲ್ಘಾಟ್ ಶಾಫ್ಟ್ ನಲ್ಲಿ ಮೊದಲಿನಿಂದಲೂ ಗಣಿಯಲ್ಲಿ ಗಣಿಗಾರಿಕೆ ಮಾಡುವಾಗ ಜಿನುಗುವ ನೀರು ಸತತವಾಗಿ ಪಂಪ್ ಮೂಲಕ ಮೇಲೆತ್ತಲಾಗುತ್ತಿತ್ತು. ಹೆನ್ರೀಸ್ ಬಳಿ ಗೋಲ್ಕಂಡ ಶಾಫ್ಟ್‌ನ ನೀರು ತಗ್ಗಿನ ಪ್ರದೇಶವಾದ ಬಾಲ್ಘಾಟ್ ಶಾಫ್ಟ್ ಗೆ ಹರಿದುಬರುತ್ತಿತ್ತು. ಅಲ್ಲಿ ಶಕ್ತಿಯುತವಾದಪಂಪ್ ಮೂಲಕ ಭೂಮಿ ಮೇಲಕ್ಕೆ ಹರಿದು ಬಿಡಲಾಗುತ್ತಿತ್ತು.ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿತ್ತು.
ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 8973 ಮೇಲ್ಮಟ್ಟದಲ್ಲಿ ಇದ್ದರೂ, 12000 ಅಡಿವರೆಗೂ ಚಿನ್ನದ ಅದಿರು ಹೊರ ತೆಗೆಯಲಾಗುತ್ತಿತ್ತು. ಉಕ್ಕೇರುತ್ತಿದ್ದ ನೀರು ಹೊರತೆಗೆಯುವ ಕಾರ್ಯ ಒಂದೇ ಸಮನೆ ನಡೆಯುತ್ತಿತ್ತು. ಶಿವನಸಮುದ್ರದಿಂದ ನೇರ ವಿದ್ಯುತ್ ಸಂಪರ್ಕವಿದ್ದ ಬಿಜಿಎಂಎಲ್ ನಲ್ಲಿ ವಿದ್ಯುತ್ ನಿಲುಗಡೆಯಾಗುತ್ತಿರಲಿಲ್ಲ. ಇದರಿಂದಾಗಿ ನೀರು ಹೊರಚೆಲ್ಲುವ ಪ್ರಕ್ರಿಯೆಗೆ ತೊಂದರೆಯಾಗುತ್ತಿರಲಿಲ್ಲ.
ಗಣಿಗಾರಿಕೆ ನಿಂತ ಮೇಲೆ ನೀರು ಹೊರತೆಗೆಯುವ ಕಾರ್ಯ ನಿಂತುಹೋಯಿತು. ಆದರೆ, ಭೂಮಿ ಮೇಲ್ಮೈಯಿಂದ ಕೆಲವೇ ಅಡಿ ಅಂತರದಲ್ಲಿ ನೀರುಸಿಗುತ್ತಿರುವುದರಿಂದ ಅದನ್ನು ಸಂಸ್ಕರಿಸಿ ಉಪಯೋಗಿಸಬಹುದೆಂಬ ವಾದ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಬಗೆದಷ್ಟು ನೀರು ಸಿಗುವ ಚಿನ್ನದ
ಗಣಿ ನೀರು ಅಂತರ್ಜಲ ಹೆಚ್ಚಳಕ್ಕೆಕೆರೆ ತುಂಬಿಸಲು ಉಪಯೋಗಿಸಬಹುದು ಎಂಬ ವಾದ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಹಲವು ಸಲ ಗಣಿ ನೀರಿನ ಗುಣಮಟ್ಟ ಪರಿಶೀಲಿಸಿದಾಗ ಕುಡಿ
ಯಲು ಯೋಗ್ಯ ಅಲ್ಲ ಎಂಬ ವರದಿ ಬಂದಿತ್ತು. ಈಚೆಗೆ ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ಕೆ.ಸಿ.ವ್ಯಾಲಿ ಯೋಜನೆ ಮೂಲಕ ಕೋಲಾರ ಜಿಲ್ಲೆ ಕೆರೆಗಳಿಗೆತುಂಬಿಸಲಾಗುತ್ತಿದೆ.
ಅಷ್ಟು ದೂರದಿಂದ ನೀರು ತರುವ ಬದಲು ಗಣಿಯಲ್ಲಿಯೇ ಸಿಗುವ ನೀರು ಸಂಸ್ಕರಿಸಿ ಉಪಯೋಗಿಸಬಾರದು ಎಂಬ ವಾದ ಕೇಳಿ ಬರುತ್ತಿದೆ. ಈ ಹಿಂದೆ ಪೊಲೀಸ್ ಇಲಾಖೆ ಅಧಿಕಾರಿ ವೆಂಕಟೇಶಪ್ಪ ಗಣಿನೀರಿನ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಆದರೆ ಕಾರ್ಯಗತಗೊಳ್ಳಲೇಇಲ್ಲ. 2004ರಲ್ಲಿ ಜಲಮಂಡಳಿ ಅಧಿಕಾರಿಗಳು ಓಕ್ಲಿ ಶಾಫ್ಟ್‌ನಲ್ಲಿ ನೀರು ತೆಗೆದು ಪರಿಶೀಲನೆ ಮಾಡಿದ್ದರು. ಚಿನ್ನದ ಗಣಿ ಶಾಫ್ಟ್ ನಿಂದ ನೀರು ಹೊರತೆಗೆದು ಕೆರೆ ತುಂಬಿಸಲು ಮತ್ತು ಕೈಗಾರಿಕೆ ಉದ್ದೇಶಗಳಿಗೆ ಬಳಸಲು ₹23ಕೋಟಿ ರೂಪಾಯಿ ಯೋಜನೆ ಸಿದ್ಧಗೊಳಿಸಲಾಗಿತ್ತು. ಆದರೆ, ಸರ್ಕಾರದ ಮಟ್ಟದಲ್ಲಿ ಆಸಕ್ತಿ ತೋರದೆ ಇದ್ದಾಗ ಅದು ನನೆಗುದಿಗೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.