ಕೋಲಾರ: ‘ಜಿಲ್ಲೆಯ ನೀರಿನ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯು ರಾಜ್ಯ ಹಣಕಾಸು ಮುಕ್ತನಿಧಿ (ಎಸ್‌ಎಫ್‌ಸಿ) ಅನುದಾನ ಹಾಗೂ ಶೇಕಡ 6.95ರ ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಪೌರ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಯರಗೋಳ್ ನೀರಾವರಿ ಯೋಜನೆ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ಜಿಲ್ಲೆಯ 3 ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಪೌರ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರು ಶಿಬಿರದ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.
‘ನಗರ ಸ್ಥಳೀಯ ಸಂಸ್ಥೆಗಳು ಜನರಿಗೆ ಹತ್ತಿರವಾಗಿ ಕೆಲಸ ಮಾಡುವ ಸಂಸ್ಥೆಗಳಾಗಿವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ನಿರ್ಣಾಯಕ. ಹಗಲಿರುಳು ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು ಹೇಳಿದರು.
‘ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಪೌರ ಕಾರ್ಮಿಕರು ನಿರ್ಲಕ್ಷ್ಯ ತೋರದೆ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಆರೋಗ್ಯವಂತರಾಗಿರಲು ವೈದ್ಯರ ಸಲಹೆ ಸೂಚನೆ ಪಾಲಿಸಬೇಕು. ಆಯುಷ್ಮಾನ್ ಭಾರತ್ ಯೋಜನೆಯಡಿ ನೀಡುವ ಆರೋಗ್ಯ ಕಾರ್ಡ್ ಕಡ್ಡಾಯವಾಗಿ ಪಡೆಯಿರಿ’ ಎಂದು ಸಲಹೆ ನೀಡಿದರು.
ನಗರಸಭೆ ಜವಾಬ್ದಾರಿ: ‘ನಗರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ನಗರವನ್ನು ಸುಂದರವಾಗಿಸುವ ಪೌರ ಕಾರ್ಮಿಕರ ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ಕಾಪಾಡುವುದು ನಗರಸಭೆಯ ಜವಾಬ್ದಾರಿ. ನಗರದ ಸರ್ವತ್ತೋಮುಖ ಅಭಿವೃದ್ಧಿಗೆ ಹಲವು ಯೋಜನೆ ಹಮ್ಮಿಕೊಂಡಿದ್ದೇವೆ. ಅಮೃತವರ್ಷಿಣಿ ಯೋಜನೆಯಡಿ ಒಳಚರಂಡಿ ಸೌಕರ್ಯ ಕಲ್ಪಿಸಲಾಗುವುದು. ಒಂದು ತಿಂಗಳಿನಿಂದ ₹ 70 ಲಕ್ಷ ಕಂದಾಯ ಸಂಗ್ರಹಿಸಲಾಗಿದೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ವಿವರಿಸಿದರು.
ಪೌರ ಕಾರ್ಮಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ಕಾರ್ಡ್ ವಿತರಿಸಲಾಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಆರ್.ಎಲ್.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಲಕ್ಷ್ಮಯ್ಯ, ನಗರಸಭೆ ಸದಸ್ಯರು, ಆರೋಗ್ಯ ನಿರೀಕ್ಷಕಿ ದೀಪಾ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.