ಕೋಲಾರ: ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದ್ದೆ ತಡ ನಗರಕ್ಕೆ ಕಲ್ಲಂಗಡಿ ದಾಂಗುಡಿ ಇಟ್ಟಿದೆ. ರಸ್ತೆ ಬದಿಯ ಅಂಗಡಿಗಳಿಗೆ ರಾಶಿರಾಶಿಯಾಗಿ ಕಲ್ಲಂಗಡಿ ಹಣ್ಣುಗಳು ಬಂದಿಳಿದಿವೆ. ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.
ದೇಹ ತಂಪಾಗಿಸುವ ಈ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ. ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚುತ್ತಿದ್ದು, ಜನರು ದಾಹ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ರಸ್ತೆ ಬದಿಯ ಕಲ್ಲಂಗಡಿ ಹಣ್ಣಿನ ಅಂಗಡಿಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಹಾಪ್‌ಕಾಮ್ಸ್‌್ ಮಳಿಗೆಗಳಲ್ಲೂ ಕಲ್ಲಂಗಡಿ ವಹಿವಾಟು ಜೋರಾಗಿದೆ.
ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಪ್ರಭಾ ಚಿತ್ರಮಂದಿರ ರಸ್ತೆ, ಅಂತರಗಂಗೆ ಬೆಟ್ಟದ ರಸ್ತೆ, ಜಿಲ್ಲಾ ಪಂಚಾಯಿತಿ ರಸ್ತೆ, ಎಂ.ಬಿ.ರಸ್ತೆ, ಟೇಕಲ್ ರಸ್ತೆ, ಡೂಂಲೈಟ್ ವೃತ್ತ, ಕೋರ್ಟ್ ವೃತ್ತ, ಕ್ಲಾಕ್‌ಟವರ್, ಮಾರುಕಟ್ಟೆಗಳು ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಕಲ್ಲಂಗಡಿ ಖದರ್.
ಇದು ಕಟ್‌ಫ್ರೂಟ್ಸ್ ಮತ್ತು ಸಲಾಡ್ ರೂಪದ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದು, ನಗರದ ಗಲ್ಲಿ- ಗಲ್ಲಿಗಳಲ್ಲೂ ಈಗ ತಳ್ಳು ಗಾಡಿಗಳಲ್ಲಿ ಕಲ್ಲಂಗಡಿಯದೇ ಕಾರುಬಾರು. ಹಾಲು ಗಲ್ಲದ ಮಕ್ಕಳಿಂದ ವಯೋವೃದ್ಧವರೆಗೆ ಬಾಯಾರಿದ ತಕ್ಷಣ ನೀರು ಅರಸುವ ಮಂದಿ ಸೀದಾ ಕಲ್ಲಂಗಡಿಯತ್ತ ಮುಖ ಮಾಡುತ್ತಿದ್ದಾರೆ.
ಬಿಡುವಿಲ್ಲದ ದುಡಿಮೆ: ಮಹಾ ಶಿವರಾತ್ರಿ ಹಬ್ಬದ ಬಳಿಕ ಚಳಿಗಾಲ ಅಂತ್ಯಗೊಳ್ಳುವುದು ಪ್ರತೀತಿ. ಹಬ್ಬದ ನಂತರ ಬಿಸಿಲ ತಾಪ ಹೆಚ್ಚುತ್ತದೆ. ಬೇಸಿಗೆಯಲ್ಲಿ ಜನರು ಸಾಮಾನ್ಯವಾಗಿ ಕಲ್ಲಂಗಡಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಬಿಸಿಲ ಝಳ, ಸೆಕೆ ಕಾಲದಲ್ಲಿ ಈ ಹಣ್ಣಿನ ಅಂಗಡಿಗಳು ರಸ್ತೆ ಬದಿಯಲ್ಲಿ ತಲೆ ಎತ್ತುವುದು ರೂಢಿ. ಹೆದ್ದಾರಿ ಅಕ್ಕಪಕ್ಕ, ಸರ್ವಿಸ್ ರಸ್ತೆ, ಹೆಚ್ಚಿನ ಜನಸಂದಣಿ ಇರುವ ರಸ್ತೆಗಳು, ಸರ್ಕಾರಿ ಕಚೇರಿಗಳ ಅಕ್ಕಪಕ್ಕದ ರಸ್ತೆಗಳು ಕಲ್ಲಂಗಡಿ ಮಾರಾಟಕ್ಕೆ ಪ್ರಶಸ್ತ ಸ್ಥಳಗಳು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆಯ ಕಾರಣಕ್ಕೆ ಕಲ್ಲಂಗಡಿ ಬೆಳೆಯುವ ರೈತರ ಸಂಖ್ಯೆ ತುಂಬಾ ಕಡಿಮೆ. ಹೀಗಾಗಿ ತಮಿಳುನಾಡು, ಆಂಧ್ರಪ್ರದೇಶದಿಂದ ಪ್ರತಿನಿತ್ಯ ಲಾರಿಗಳಲ್ಲಿ ಲೋಡ್‌ಗಟ್ಟಲೇ ಹಣ್ಣುಗಳನ್ನು ನಗರಕ್ಕೆ ತರಿಸಲಾಗುತ್ತಿದೆ. ಮಾರ್ಚ್‌ನಿಂದ ಮೇ ತಿಂಗಳ ಅಂತ್ಯದವರೆಗೆ ಮೂರು ತಿಂಗಳ ಕಾಲ ಕಲ್ಲಂಗಡಿ ವ್ಯಾಪಾರಿಗಳದು ಬಿಡುವಿಲ್ಲದ ದುಡಿಮೆ.
ಏರಿದ ಬೆಲೆ: ಕಲ್ಲಂಗಡಿಯಲ್ಲಿ ಕಿರಣ್, ನಾಮಧಾರಿ, ಮಧು, ಸುಪ್ರೀತ್ ತಳಿಯ ಹಣ್ಣುಗಳಿವೆ. ನಾಮಧಾರಿ ಹಣ್ಣುಗಳು ನೋಡಲು ಆಕರ್ಷಕ ಹಾಗೂ ತಿನ್ನಲು ರುಚಿಕರ. ಆದರೆ, ಬೆಲೆ ತುಸು ಹೆಚ್ಚು. ಕಿರಣ್ ತಳಿಯ ಹಣ್ಣುಗಳ ಬೆಲೆ ಕಡಿಮೆ ಇದ್ದರೂ ರುಚಿಯ ಕಾರಣಕ್ಕೆ ಜನ ನಾಮಧಾರಿ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕಿರಣ್ ತಳಿಯ ಹಣ್ಣುಗಳನ್ನು ಹೆಚ್ಚಾಗಿ ಜ್ಯೂಸ್‌ಗೆ ಬಳಸಲಾಗುತ್ತಿದೆ.
ನಗರದ ಮಾರುಕಟ್ಟೆಯಲ್ಲಿ ಫೆಬ್ರುವರಿಯಲ್ಲಿ ಕಲ್ಲಂಗಡಿ ಹಣ್ಣಿನ ಬೆಲೆ ಕೆ.ಜಿಗೆ ₹ 15 ಇತ್ತು. ಈಗ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ₹ 30ಕ್ಕೆ ಜಿಗಿದಿದೆ. ಹಣ್ಣಿನ ಗುಣಮಟ್ಟ, ಗಾತ್ರ ಹಾಗೂ ತಳಿಯ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಕಿರಣ್ ತಳಿಯ ಕಲ್ಲಂಗಡಿ ಕೆ.ಜಿಗೆ ₹ 20ಕ್ಕೆ ಹಾಗೂ ನಾಮಧಾರಿ ತಳಿಯ ಕಲ್ಲಂಗಡಿಗೆ ಕೆ.ಜಿಗೆ ₹ 30ಕ್ಕೆ ಮಾರಾಟವಾಗುತ್ತಿದೆ.
ಆರೋಗ್ಯಕರ ಹಣ್ಣು: ಶೇ 92ರಷ್ಟು ಭಾಗ ನೀರಿನ ಅಂಶದಿಂದಲೇ ಕೂಡಿರುವ ಕಲ್ಲಂಗಡಿಯು ಆರೋಗ್ಯಕರ ಹಣ್ಣು. ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಾಗಿರುವುದರಿಂದ ಕಲ್ಲಂಗಡಿಯು ದೇಹಕ್ಕೆ ತಂಪು ನೀಡುತ್ತದೆ. ಇದರ ಸೇವನೆಯು ಜೀರ್ಣ ಕ್ರಿಯೆಗೂ ಪೂರಕ. ಅಲ್ಲದೇ, ದೇಹದಲ್ಲಿ ನೀರಿನ ಅಂಶವನ್ನು ವೃದ್ಧಿಸಿ ಉಷ್ಣತೆಯನ್ನು ತಗ್ಗಿಸುತ್ತದೆ.
ಕಲ್ಲಂಗಡಿಯಲ್ಲಿ ವಿಟಮಿನ್ ಎ, ಬಿ ಮತ್ತು ಬಿ6 ಹೇರಳವಾಗಿದೆ. ಕೊಬ್ಬುರಹಿತ, ಅತಿ ಕಡಿಮೆ ಸೋಡಿಯಂ ಹೊಂದಿರುವ ಹಣ್ಣು ಇದಾಗಿರುವುದರಿಂದ ಒಂದು ಕಪ್ ಕಲ್ಲಂಗಡಿಯಲ್ಲಿ ಕೇವಲ 40 ಕ್ಯಾಲೊರಿ ಇರುತ್ತದೆ. ಇದರಲ್ಲಿನ ಲೈಕೊಪಿನ್ ಅಂಶವು ಹೃದಯ ಮತ್ತು ಮೂಳೆಗಳ ಆರೋಗ್ಯ ಕಾಪಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಹೇರಳವಾದ ಖನಿಜ, ಅಲ್ಪ ಪ್ರಮಾಣದ ಕಬ್ಬಿಣಾಂಶವಿರುವ ಕಲ್ಲಂಗಡಿಯು ಮೂತ್ರ ಸಂಬಂಧಿ ರೋಗಗಳಿಗೆ ಅತ್ಯುತ್ತಮ ಮದ್ದು. ದಿನನಿತ್ಯದ ಬಳಕೆಯಿಂದ ಮೂತ್ರಪಿಂಡದಲ್ಲಿ ಕಲ್ಲು ಬರುವುದನ್ನು ತಡೆಯುವ ಸಾಮರ್ಥ್ಯವೂ ಈ ಹಣ್ಣಿಗಿದ್ದು, ಚರ್ಮ, ಕಣ್ಣು, ಕೂದಲು ಸೇರಿದಂತೆ ಆಂತರಿಕವಾಗಿ ದೇಹಕ್ಕೆ ನಾನಾ ರೀತಿಯಲ್ಲಿ ಪ್ರಯೋಜನಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.