ಕೋಲಾರ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವ ಮುಕ್ತ ಅವಕಾಶಗಳೂ ನಮ್ಮ ಪಕ್ಷದಲ್ಲಿ ಇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಕ್ಯಾಲನೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ.ಇಬ್ರಾಹಿಂ ಕೂಡ ಹೇಳಿದ್ದಾರೆ. ಈ ರೀತಿ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ’ ಎಂದರು.
‘ಮುಸ್ಲಿಮರೂ ನಮ್ಮವರೇ. ಅವರೂ ಕರ್ನಾಟಕದ ಪ್ರಜೆಗಳು, ಕನ್ನಡಿಗರು. ಹೀಗಾಗಿ, ಆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬಾರದೆಂದೇನೂ ಇಲ್ಲ. ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಪ್ರಶ್ನೆ ಇದಲ್ಲ. ನನಗೆ ಆ ಸಮುದಾಯಗಳಲ್ಲಿನ ಸಮಸ್ಯೆಗೆ ಪರಿಹಾರ ಬೇಕು’ ಎಂದು ತಿಳಿಸಿದರು.
‘ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧನಿದ್ದೇನೆ. ಇದು ಸ್ವಯಂಪ್ರೇರಣೆಯಿಂದ ಮಾಡಿದ ಘೋಷಣೆ ಅಲ್ಲ. ದಲಿತ ಸಮುದಾಯದ ಯುವಕನೊಬ್ಬ ಆತ ಎದುರಿಸಿರುವ ಸಮಸ್ಯೆ ಹೇಳಿಕೊಂಡ. ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ ಅವರು,ದಲಿತರ ಮತ ಪಡೆಯಲು ಈ ಘೋಷಣೆ ಮಾಡಿಲ್ಲ. ಹಾಗೆಯೇ ಮಹಿಳೆಯರ ಕಷ್ಟಗಳನ್ನು ಯಾವುದೇ ಸರ್ಕಾರ ಆಲಿಸುತ್ತಿಲ್ಲ. ಮಹಿಳೆಯರ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಅವಶ್ಯವೆಂದಾದರೆ ಅದಕ್ಕೂ ಸಿದ್ಧ’ ಎಂದು ನುಡಿದರು. ‘ಬಿಜೆಪಿಯಿಂದ ಒಂದೊಂದು ಭಾಗದಲ್ಲಿ ಒಂದೊಂದು ಸಮುದಾಯದ ಸಮಾವೇಶ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನವರೂ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಪಕ್ಷಗಳ ನಾಯಕರು ಸಮಾವೇಶ ಮಾಡಿ ಮಾತನಾಡುವುದಕ್ಕೂ, ಸಮಾಜದ ಪರಿಸ್ಥಿತಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಹಾಸಿಗೆ, ದಿಂಬಿನಲ್ಲೂ ಕಾಂಗ್ರೆಸ್‌ನವರು ಹಣ ಹೊಡೆದರು ಎಂಬುದಾಗಿ ಬಿಜೆಪಿ ಆರೋಪಿಸಿತು. ಈಗ ಕಾಂಗ್ರೆಸ್‌ನವರು ಬಿಜೆಪಿ ಮೇಲೆ ದೂರುತ್ತಿದ್ದಾರೆ. ಆದರೆ, ದಲಿತರ ಪರಿಸ್ಥಿತ ಮಾತ್ರ ಸುಧಾರಿಸಿಲ್ಲ’ ಎಂದರು. ‘ಕಾಂಗ್ರೆಸ್‌ನಲ್ಲಿ ಡಾ.ಜಿ.ಪರಮೇಶ್ವರ ಹಾಗೂ ಬಿಜೆಪಿಯಲ್ಲಿ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದರೂ ಅಧಿಕಾರ ಚಲಾಯಿಸಲು ಅವರಿಗೆ ಅವಕಾಶ ಕೊಡಲಿಲ್ಲ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೀಸಲಿರುವ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದೊಂದು ಕಾಟಾಚಾರದ ಇಲಾಖೆ. ಮಕ್ಕಳ ಪೌಷ್ಠಿಕಾಂಶ ಆಹಾರದಲ್ಲೂ ದುಡ್ಡು ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು. ‘ನೆಹರೂ ಕುಟುಂಬದಿಂದ ಮೂರು ತಲೆಮಾರಿಗಾಗುವಷ್ಟು ದುಡ್ಡು ಮಾಡಿಕೊಂಡಿದ್ದು, ಅವರ ನೆರವಿಗೆ ನಿಲ್ಲಬೇಕೆಂದು ಶ್ರೀನಿವಾಸಪುರದ ಶಾಸಕರು ಹೇಳಿದ್ದಾರೆ. ಕೆ.ಸಿ.ವ್ಯಾಲಿ ಮೂಲಕ ಜನರಿಗೆ ವಿಷ ತಿನ್ನಿಸಿ ದುಡ್ಡು ಹೊಡೆದಿದ್ದೇ ಮೂರು ತಲೆಮಾರಿಗಾಗುವಷ್ಟು ಮಾಡಿಕೊಂಡ ಸಾಧನೆ. ಎತ್ತಿನ ಹೊಳೆ ಜಾರಿಯಾಗಲಿಲ್ಲ; ಹಣ ಮಾತ್ರ ಹರಿಯಿತು. ಈಗ ಅವರ ತಲೆ ಕೂದಲೂ ಉದುರಿ ಹೋಗಿದೆ’ ಎಂದು ವಾಗ್ದಾಳಿ ನಡೆಸಿದರು. ‘ಹಲವರು ಅನಾರೋಗ್ಯ ಸಮಸ್ಯೆ ಹೊತ್ತು ನನ್ನ ಮನೆ ಬಾಗಿಲಿಗೆ ಬರುತ್ತಿದ್ದಾರೆ. ನಾನು ಎಷ್ಟು ಮಂದಿಗೆ ಸಹಾಯ ಮಾಡಲು ಸಾಧ್ಯ? ಸಾರ್ವಜನಿಕರ ದರ್ಶನಕ್ಕೆ ಮನೆಯಿಂದ ಹೊರಗಡೆ ಬಂದರೆ ₹ 50 ಲಕ್ಷದಿಂದ ₹ 1 ಕೋಟಿವರೆಗೆ ಬೇಕಾಗುತ್ತದೆ. ವೈಯಕ್ತಿಕವಾಗಿ ಎಷ್ಟು ಪರಿಹಾರ ನೀಡಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಚುನಾವಣೆ ವೇಳೆ ಮತಕ್ಕಾಗಿ ಹಣ ಪಡೆಯುವುದಿಲ್ಲ ಎಂಬ ಮನಸ್ಥಿತಿ ಮತದಾರರಿಗೆ ಬರಬೇಕು. ಹಣ ಹರಿದಾಡುವುದರ ಮೇಲೆ ನಿರ್ಬಂಧ ವಿಧಿಸಲು ಸರ್ಕಾರ ಹಾಗೂ ಚುನಾವಣಾ ಆಯೋಗದಿಂದ ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದರೆ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇವೆ’ ಎಂದರು.
‘ಪ್ರಜಾವಾಣಿ’ ಸಂಪಾದಕೀಯ ಪ್ರಸ್ತಾಪ
‘ಚಾಮರಾಜನಗರದಲ್ಲಿ ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗ್ರಾಮದವರು ಟ್ಯಾಂಕ್ ಶುದ್ಧೀಕರಿಸಿರುವುದು ಅಮಾನವೀಯ ಘಟನೆ. ಈ ಸಂಬಂಧ ಪ್ರಮುಖ ಪತ್ರಿಕೆಯಲ್ಲಿ (ಪ್ರಜಾವಾಣಿ) ಸಂಪಾದಕೀಯವೂ ಬಂದಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಹಾಗೂ ಮುಕ್ತವಾಗಿ ಸ್ಪಂದಿಸುವ ಅದೇ ಸಮುದಾಯದ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡುವೆ. ಬರೀ ಹೆಬ್ಬೆಟ್ಟು ಹಾಕಿಸಿಕೊಳ್ಳಲು ಅಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.