ADVERTISEMENT

ವಾಟ್ಸ್‌ಆ್ಯಪ್‌ ವಿವಿ ಪದವೀಧರರೇ ಹೆಚ್ಚು: ಕೆ.ವಿ.ಪ್ರಭಾಕರ್

ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನ ಮರೆ–ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:20 IST
Last Updated 6 ಅಕ್ಟೋಬರ್ 2024, 14:20 IST
ಕೋಲಾರದಲ್ಲಿ ಭಾನುವಾರ ನಡೆದ ‘ಹಿರಿಯರ ಸ್ಮರಣೆ ಮತ್ತು ಗ್ರಂಥಗಳ ಹಸ್ತಾಂತರ’ ಕಾರ್ಯಕ್ರಮದಲ್ಲಿ (ಜಿ.ನಾರಾಯಣಸ್ವಾಮಿ ಸ್ಮರಣೆ) ಗಣ್ಯರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಭಾನುವಾರ ನಡೆದ ‘ಹಿರಿಯರ ಸ್ಮರಣೆ ಮತ್ತು ಗ್ರಂಥಗಳ ಹಸ್ತಾಂತರ’ ಕಾರ್ಯಕ್ರಮದಲ್ಲಿ (ಜಿ.ನಾರಾಯಣಸ್ವಾಮಿ ಸ್ಮರಣೆ) ಗಣ್ಯರು ಪಾಲ್ಗೊಂಡಿದ್ದರು   

ಕೋಲಾರ: ‘ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನ ಮರೆಯಾಗಿದೆ. ವಾಟ್ಸ್‌ಆ್ಯಪ್‌ ಯುನಿವರ್ಸಿಟಿ ಪದವೀಧರರೇ ಹೆಚ್ಚಾಗಿದ್ದು, ಕಾಪಿ-ಪೇಸ್ಟ್ ಸುದ್ದಿಗಳೇ ರಾರಾಜಿಸುತ್ತಿರುವುದನ್ನು ಕಾಣುವಂತಾಗಿದೆ’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಹಿರಿಯರ ಸ್ಮರಣೆ ಮತ್ತು ಗ್ರಂಥಗಳ ಹಸ್ತಾಂತರ’ ಸಮಾರಂಭ (ಜಿ.ನಾರಾಯಣಸ್ವಾಮಿ ಸ್ಮರಣೆ) ಉದ್ಘಾಟಿಸಿ ಅವರು ಮಾತನಾಡಿದರು.

‘ಅಧ್ಯಯನ ಮತ್ತು ಜ್ಞಾನ ಮಾತ್ರ ಒಬ್ಬ ಉತ್ತಮ ಪತ್ರಕರ್ತನನ್ನು ರೂಪಿಸಬಲ್ಲದು. ಪತ್ರಿಕೋದ್ಯಮದಲ್ಲಿ ಅಧ್ಯಯನ, ಜ್ಞಾನ ಮತ್ತು ಸಂಸ್ಕಾರ ದಾರಿದೀಪಗಳಾಗಿವೆ. ಪತ್ರಕರ್ತರ ಯಾವುದೇ ಪ್ರಶ್ನೆಗೊ ಮುನ್ನ ಆ ವಿಷಯದ ಬಗ್ಗೆ ಮಾಹಿತಿ ಹೊಂದಿರಬೇಕು’ ಎಂದರು.

ADVERTISEMENT

‘ಪ್ರಾಮಾಣಿಕತನ, ನೈತಿಕತೆ ಹೊಂದಿದವರು ನೇರ ಮತ್ತು ನಿಷ್ಟುರವಾದಿಗಳಾಗಿದ್ದು, ದಿಟ್ಟತನದಿಂದ ಯಾರಿಗೂ ಹೆದರದೆ ಯಾವುದೇ ಮುಲಾಜಿಲ್ಲದೆ ದಿಟ್ಟತನದಿಂದ ಪ್ರಶ್ನಿಸುತ್ತಾರೆ ಎಂಬುವುದಕ್ಕೆ ದಿವಂಗತರಾದ ಜಿ.ನಾರಾಯಣಸ್ವಾಮಿ ಹಾಗೂ ಕೆ.ಕೃಷ್ಣಸ್ವಾಮಿ ಉದಾಹರಣೆ’ ಎಂದು ಹೇಳಿದರು.

ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಎನ್.ಜಗನ್ನಾಥ್ ಪ್ರಕಾಶ್ ಮಾತನಾಡಿ, ‘ತಂದೆ ನಾರಾಯಣಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಟ್ಟಾಭಿರಾಮನ್ ಅವರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರು. ಜಿಲ್ಲೆ ಪ್ರಗತಿ, ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸುತ್ತಿದ್ದರು’ ಎಂದರು.

‘ಮುಂದಿನ ವರ್ಷ 100 ವರ್ಷ ಪೂರೈಸಲಿರುವ ತಂದೆಯ ನೆನಪಿನಾರ್ಥ ಇಬ್ಬರು ಪತ್ರಕರ್ತರ ಮಕ್ಕಳ ಶಿಕ್ಷಣಾಭ್ಯಾಸದ ವೆಚ್ಚವನ್ನು ಭರಿಸುವ ಯೋಜನೆ ಇದೆ. ಈ ಕುರಿತು ಕುಟುಂಬದವರೊಂದಿಗೆ ಪ್ರಸ್ತಾಪಿಸಿ ಘೋಷಣೆ ಮಾಡುತ್ತೇನೆ’ ಎಂದರು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ‘ನೆರವಾದವರನ್ನು ನೆನಪಿಸಿ ಕೃತಜ್ಞತೆಯನ್ನು ಸಲ್ಲಿಸುವುದು ಮಾನವೀಯ ಧರ್ಮ. ಅದನ್ನು ನಾವು ಬಹಳ ತಡವಾಗಿ ಮಾಡುತ್ತಿದ್ದೇವೆ. ಪ್ರತಿ ವರ್ಷ ಅ.6 ರಂದು ಜಿ.ನಾರಾಯಣಸ್ವಾಮಿ ಜನ್ಮದಿನದ ಕಾರ್ಯಕ್ರಮ ಮಾಡಿ ಅವರ ಕೆಲಸ ಸ್ಮರಿಸೋಣ’ ಎಂದರು.

ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾದ ವಿ.ಮುನಿರಾಜು ಹಾಗೂ ಕೆ.ಎಸ್‌.ಗಣೇಶ್‌ ಮಾತನಾಡಿದರು‌. ಚಿಂತಕ ಜಯಸಿಂಹ, ಎಚ್.ಎ.ಪುರುಷೋತ್ತಮ್, ತ್ರಿಚಕ್ರವಾಹನಗಳ ಸಂಘದ ರಾಜ್ಯ ಮುಖಂಡ ಕೆ.ವಿ.ಸುರೇಶ್‍ಕುಮಾರ್ ಅವರು ಜಿ.ನಾರಾಯಣಸ್ವಾಮಿ ಜೊತೆಗಿದ್ದ ತಮ್ಮ ನೆನಪು ಹಂಚಿಕೊಂಡರು.

ಕೈವಾರ ಕ್ಷೇತ್ರದ ತಳಗವಾರ ಆನಂದ್ ಮತ್ತು ಲಕ್ಷ್ಮಿನಾರಾಯಣ ಅವರು ಜಗನ್ನಾಥ್ ಪ್ರಕಾಶ್ ದಂಪತಿಯನ್ನು ಸನ್ಮಾನಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಕೋ.ನಾ.ಪ್ರಭಾಕರ್ ಪ್ರಾರ್ಥಿಸಿ, ಸಿ.ಜಿ.ಮುರಳಿ ಜಿ.ನಾರಾಯಣಸ್ವಾಮಿ ಅವರ ಪರಿಚಯ, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಜಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ಚೇತನ್‌ಕುಮಾರ್‌, ಪತ್ರಕರ್ತರು, ಬಲಿಜ ಸಮುದಾಯದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.