ADVERTISEMENT

ಪ್ರಜ್ವಲ್‌ ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸಬೇಕು: ಡಿ.ವಿ. ಸದಾನಂದಗೌಡ

ರಾಜಕೀಯ ಪುನರ್ವಸತಿ ಕೇಂದ್ರವಾಗಿರುವ ವಿಧಾನ ಪರಿಷತ್‌: ಡಿವಿಎಸ್‌

​ಪ್ರಜಾವಾಣಿ ವಾರ್ತೆ
Published 21 ಮೇ 2024, 13:56 IST
Last Updated 21 ಮೇ 2024, 13:56 IST
<div class="paragraphs"><p>ಡಿ.ವಿ. ಸದಾನಂದಗೌಡ</p></div>

ಡಿ.ವಿ. ಸದಾನಂದಗೌಡ

   

ಕೋಲಾರ: ‘ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬೇಗನೇ ವಾಪಸ್‌ ಬರಬೇಕು. ತನಿಖೆಯಿಂದ ಹೆಚ್ಚು ದಿನ ತಪ್ಪಿಸಿಕೊಂಡು ಇರಲು ಆಗದು. ಎಲ್ಲೇ ಇದ್ದರೂ ಬಂದು ತನಿಖೆಗೆ ಸಹಕಾರ ನೀಡಬೇಕು’ ಎಂದು ಸಂಸದ ಡಿ.ವಿ.ಸದಾನಂದಗೌಡ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತನಿಖೆಗೆ ಹಾಜರಾಗದಿದ್ದರೆ ಸಂಶಯಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ತಮ್ಮ ಕುಟುಂಬದ ಅತ್ಯಂತ ಗೌರವಯುತ ರಾಜಕಾರಣಿಗೆ ಮುಜುಗರ ಉಂಟಾಗುತ್ತದೆ, ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಆಗಬಹುದು ಎಂಬುದನ್ನು ಅವರು ಮರೆಯಬಾರದು’ ಎಂದರು.

ADVERTISEMENT

‘ಯಾವುದೇ ಪ್ರಕರಣ ತನಿಖೆ ಹಂತದಲ್ಲಿರುವಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಯಾರೂ ಮನಬಂದಂತೆ ಹೇಳಿಕೆ ನೀಡುತ್ತಾ ಇರಬಾರದು. ಇಲ್ಲದಿದ್ದರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದಂತಾಗಿ ತನಿಖೆಯ ದಿಕ್ಕು ತಪ್ಪುತ್ತದೆ’ ಎಂದು ಎಚ್ಚರಿಸಿದರು.

‘ಎಚ್‌.ಡಿ.ದೇವೇಗೌಡರು ತಮ್ಮ ಕುಟುಂಬದವರ ವಿರುದ್ಧವೇ ಪ್ರಕರಣವಿದ್ದರೂ ಮಾತನಾಡದೇ ತಪ್ಪಿಸ್ಥರನ್ನು ಶಿಕ್ಷೆಗೆ ಒಳಪಡಿಸಲಿ ಎಂದು ಹೇಳಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೆಲವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬುದು ನನ್ನ ವಾದ. ಈ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಚಿಂತಕರ ಚಾವಡಿ ಎಂಬಂತಿದ್ದ ವಿಧಾನ ಪರಿಷತ್‌ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದುಕೊಂಡು ರಾಜಕೀಯ ಪುನರ್ವಸತಿ ಕೇಂದ್ರವಾಗುತ್ತಿದೆ. ಯಾರನ್ನೋ ಸಮಾಧಾನಪಡಿಸುವ ಕೇಂದ್ರವಾಗಿದ್ದು, ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ. ಪರಿಷತ್‌ಗೆ ಯೋಗ್ಯರು ಆಯ್ಕೆಯಾಗಿ ಬರಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.