ADVERTISEMENT

ಬಿಜೆಪಿಯಲ್ಲಿ ಲಿಂಗಾಯತರೇ ಸಿಎಂ ಆಗುವುದೇಕೆ: ಸಿ.ಟಿ.ರವಿಗೆ ದಲಿತ ಮುಖಂಡರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 14:11 IST
Last Updated 9 ಫೆಬ್ರುವರಿ 2023, 14:11 IST
   

ಕೋಲಾರ: ‘ಬಿಜೆಪಿಯಲ್ಲಿ ಬ್ರಾಹ್ಮಣ, ಲಿಂಗಾಯತರನ್ನೇ ಏಕೆ ಮುಖ್ಯಮಂತ್ರಿ ಮಾಡುತ್ತೀರಿ?’ ಎಂದು ದಲಿತ ಮುಖಂಡರೊಬ್ಬರು ಬಿಜೆಪಿ ಮುಖಂಡ ಸಿ.ಟಿ. ರವಿ ಅವರನ್ನು ಪ್ರಶ್ನಿಸಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನಾ ವೇದಿಕೆಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ 'ಅಂತ್ಯೋದಯದಿಂದ ಸರ್ವೋದಯ' ಚಿಂತನಾ-ಮಂಥನಾ ಕಾರ್ಯಕ್ರಮದಲ್ಲಿ ದಲಿತ ಮುಖಂಡರೊಬ್ಬರು ಈ ಪ್ರಶ್ನೆ ಕೇಳಿದರು.

ಆಗ ಶಾಸಕ ಸಿ.ಟಿ.ರವಿ ಉತ್ತರಿಸಿ, ‘ನಾಯಕತ್ವ ಬೆಳೆಯುತ್ತಾ ಎಲ್ಲಾ ಸಮುದಾಯಕ್ಕೂ ಸಮನಾದ ಅವಕಾಶ ಸಿಗಲಿದೆ. ಜಾತಿ ಆಧಾರದಲ್ಲಿ ಅಲ್ಲ; ಬದಲಾಗಿ ನೀತಿ, ನಿಯತ್ತು ಹಾಗೂ ನಿಷ್ಠೆಯಿಂದ ಇದ್ದವರಿಗೆ ಅವಕಾಶ ಒಲಿಯಲಿದೆ’ ಎಂದರು.

ADVERTISEMENT

ಇನ್ನೊಬ್ಬ ದಲಿತ ಮುಖಂಡರು, ‘ಮೀಸಲಾತಿ ವಿರೋಧಿ ಅಲ್ಲ ಎನ್ನುತ್ತೀರಿ, ಏಕೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದೀರಿ? ಜಂತರ್ ಮಂತರ್‌ ಬಳಿ ಸಂವಿಧಾನ ಪ್ರತಿ ಸುಟ್ಟಿದ್ದು ಏಕೆ? ತಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ರಾಜ್ಯದ ಬಿಜೆಪಿ ಸಂಸದರೊಬ್ಬರು ಹೇಳಿದ್ದು ಏಕೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಿ.ಟಿ.ರವಿ, ‘1991ರಲ್ಲಿಯೇ ಖಾಸಗೀಕರಣ ಆರಂಭವಾಯಿತು. ಸಂವಿಧಾನ ಪ್ರತಿ ಸುಟ್ಟಿದ್ದು ಹಿಂದೂ ಕಾರ್ಯಕರ್ತರಲ್ಲ. ಅದೊಂದು ಸುಳ್ಳು ಸುದ್ದಿ. ಸಂವಿಧಾನ ತಿದ್ದುಪಡಿ ಹೆಚ್ಚು ಆಗಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. 1975ರಲ್ಲಿ ಸಂವಿಧಾನದ ಮೂಲಸ್ವರೂಪ ತಿರುಚುವ ಕೆಲಸ ನಡೆಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.