ಕೋಲಾರ: ‘ನಾವು ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ. ಏಕೆ ಅವತ್ತು ನೀವು ಸಾಲ ಮನ್ನಾ ಮಾಡುವುದಾಗಿ ಹೇಳಿದಿರಿ? ಮುಖ್ಯಮಂತ್ರಿಗಳೇ ನಿಮ್ಮ ಮಾತು ಉಳಿಸಿಕೊಳ್ಳಿ. ಸಾಲ ಮರುಪಾವತಿ ಮಾಡಿಸಿಕೊಳ್ಳಲು ಬರುವವರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ’
ತಾಲ್ಲೂಕಿನ ಸುಗಟೂರು ಹೋಬಳಿಯ ಹೊಸಮಟ್ನಹಳ್ಳಿ ಗ್ರಾಮದಲ್ಲಿ ಸಾಲ ಪಾವತಿಸುವುದಿಲ್ಲವೆಂದು ಮಹಿಳೆಯರು ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಬ್ಯಾನರ್ ಕಟ್ಟಿ ಪ್ರತಿಭಟನೆ ನಡೆಸಿದರು. ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‍ನಿಂದ ನೀಡಿರುವ ಸಾಲವನ್ನು ಮನ್ನಾ ಮಾಡಬೇಕೆಂಬ ಒತ್ತಾಯಿಸಿದರು.
ಸಾಲ ಮರುಪಾವತಿ ಮಾಡಿಸಿಕೊಳ್ಳಲು ಯಾರೂ ಗ್ರಾಮಕ್ಕೆ ಬರಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳಬೇಕೆಂದು ಆಗ್ರಹಿಸಿದರು.
‘ನುಡಿದಂತೆ ನಡೆಯುವ ನಮ್ಮ ಮುಖ್ಯಮಂತ್ರಿ ಸಿದ್ದರಾಮಣ್ಣ. ಸಹಕಾರ ಬ್ಯಾಂಕ್ ಸಾಲ ವಸೂಲಿಗಾರರೇ ನಮ್ಮ ಗ್ರಾಮಕ್ಕೆ ನಿಮಗೆ ಪ್ರವೇಶವಿಲ್ಲ. ಆದಾಗ್ಯೂ ಬಂದು ದೌರ್ಜನ್ಯ ಎಸಗಿದರೆ ಮುಂದೆ ಜರುಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ’ ಎಂಬುದಾಗಿ ಬ್ಯಾನರ್‌ನಲ್ಲಿ ಬರೆದಿದ್ದಾರೆ.
‘ವೇಮಗಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ, ಹೇಳಿದ ಮಾತಿನಂತೆ ನಡೆದುಕೊಳ್ಳಬೇಕು. ಬ್ಯಾಂಕ್‌ಗೆ ನಷ್ಟವಾದರೆ ಅಧಿಕಾರಿಗಳು ಮುಖ್ಯಮಂತ್ರಿ ಬಳಿ ಹೋಗಿ ಕೇಳಲಿ’ ಎಂದು ರೈತ ಮುಖಂಡರಾದ ನಳಿನಿ ಗೌಡ ತಿಳಿಸಿದರು.
ಫೆಬ್ರುವರಿ 13ರಂದು ವೇಮಗಲ್ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್‌ನ ರೈತ ಮಹಿಳೆಯರ ಸಮಾವೇಶದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಾಲದ ಕಂತು ಸಮರ್ಪಕವಾಗಿ ಪಾವತಿಸಿದ ಸ್ತ್ರೀಶಕ್ತಿ ಸಂಘಗಳ ಬಾಕಿ ಸಾಲಮನ್ನಾ ಮಾಡಲಾಗುವುದು. ಮಹಿಳೆಯರು ಮತ್ತು ಸ್ತ್ರೀ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು’ ಎಂದು ಘೋಷಿಸಿದ್ದರು.
‘ಮಹಿಳೆಯರಿಗೆ ಕೊಟ್ಟ ಮಾತಿನಂತೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಸಿದ್ದರಾಮಯ್ಯ ಮನ್ನಾ ಮಾಡಬೇಕು. ಆಗ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ. ಪಕ್ಷದೊಳಗಿನ ಕುತಂತ್ರಿಗಳ ಮಾತು ಕೇಳಬಾರದು’ ಎಂದು ರೈತ ಮುಖಂಡ ಶ್ರೀನಿವಾಸಗೌಡ ಆಗ್ರಹಿಸಿದರು.
ವಾರದ ಹಿಂದೆ ತಾಲ್ಲೂಕಿನ ಕ್ಯಾಲನೂರು ಭಾಗದಲ್ಲಿ ಸಾಲ ಪಾವತಿಸುವಂತೆ ಹೇಳಲು ಹೋದ ಅಧಿಕಾರಿಗಳನ್ನು ಮಹಿಳೆಯರು ತರಾಟೆ ತೆಗೆದುಕೊಂಡಿದ್ದರು. ಹೀಗಾಗಿ, ಸಾಲ ವಸೂಲಿ ಮಾಡುವುದು ಕೋಲಾರ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ‘ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್‌ಗೆ ಭಾರಿ ನಷ್ಟವಾಗಲಿದೆ’ ಎಂದು ಅಧಿಕಾರಿಗಳು, ಆಡಳಿತ ಮಂಡಳಿಯವರು ಕಂಗಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.