ADVERTISEMENT

ಕೆಜಿಎಫ್‌ | ದುಡಿಯುವ ಮಹಿಳೆಗೆ ಸುರಕ್ಷಿತ ವಾತಾವರಣ ಅಗತ್ಯ: ಗಣಪತಿ ಗುರುಸಿದ್ದ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 15:39 IST
Last Updated 25 ನವೆಂಬರ್ 2023, 15:39 IST
ಕೆಜಿಎಫ್‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಮಾತನಾಡಿದರು. ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು
ಕೆಜಿಎಫ್‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಮಾತನಾಡಿದರು. ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು   

ಕೆಜಿಎಫ್‌: ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಯಾವುದೇ ರೀತಿಯ ದೌರ್ಜನ್ಯವನ್ನು ತೀವ್ರವಾಗಿ ಪರಿಗಣಿಸಲಾಗುವುದು ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಮಹಿಳಾ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ನಡೆದ ಅಂತರರಾಷ್ಟ್ರೀಯ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಕಚೇರಿಗಳಲ್ಲಿ ಮಹಿಳೆಯರ ಮೇಲೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಲೈಂಗಿಕ ದೌರ್ಜನ್ಯ ನಡೆಸುವುದು ತೀವ್ರ ಅಪರಾಧ. ಈ ರೀತಿ ಮಾಡುವವರು ಮತ್ತು ಅವರಿಗೆ ಸಹಕರಿಸಿದವರು ಕಾನೂನಿನ ದಂಡನೆಗೆ ಒಳಗಾಗುತ್ತಾರೆ. ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಿಗುವ ಕಾನೂನು ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ನಾಗವೇಣಿ ಮಾತನಾಡಿ, ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಂಭವ ಇದ್ದಲ್ಲಿ ನೇರವಾಗಿ ಭೇಟಿಯಾಗಿ ದೂರು ಸಲ್ಲಿಸಬಹುದು. ಯಾವುದೇ ರೀತಿಯ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಸೃಷ್ಟಿಸುವುದಿಲ್ಲ ಎಂದರು. 

ADVERTISEMENT

ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಮೇಲೆ ಪುರುಷರಿಂದ ದೌರ್ಜನ್ಯ ನಡೆದರೂ ಮನೆಯಲ್ಲಿ ಇಲ್ಲವೇ ಹಿರಿಯ ಅಧಿಕಾರಿಗಳಿಗೆ ದೂರು ಕೊಡಲು ಹಿಂದೇಟು ಹಾಕುತ್ತಾರೆ. ಲೈಂಗಿಕ ದೌರ್ಜನ್ಯದ ವಿಷಯ ಹೊರಗೆ ಬಂದರೆ ಮನೆಯಲ್ಲಿ ಕೆಲಸಕ್ಕೆ ಹೋಗದಂತೆ ನಿರ್ಬಂಧಿಸಬಹುದು. ಸಮಾಜದಲ್ಲಿ ಮುಜುಗರಕ್ಕೆ ಒಳಗಾಗಬಹುದು ಎಂಬ ಭೀತಿ ಸಾಮಾನ್ಯವಾಗಿ ದುಡಿಯುವ ಮಹಿಳೆ ಎದುರಿಸುತ್ತಿರುತ್ತಾರೆ. ಹದಿನೆಂಟು ವರ್ಷದ ಕೆಳಗಿನವರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋದಂತಹ ಕಠಿಣ ಕಾನೂನು ಜಾರಿಗೆ ಬಂದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಶಾಲೆ ಮಟ್ಟದಲ್ಲಿಯೇ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಕಲೈಸೆಲ್ವಿ ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್‌.ರಾಜಗೋಪಾಲಗೌಡ ಮಾತನಾಡಿದರು. ನ್ಯಾಯಾಧೀಶರಾದ ಮುಜಾಫರ್ ಎ. ಮಾಂಜರಿ, ಆರ್.ಮಂಜುನಾಥ್‌, ವಕೀಲರ ಸಂಘದ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.