ಕೋಲಾರ: ‘ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ನಿಯಂತ್ರಿಸಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗುರುರಾಜ ಜಿ.ಶಿರೋಳ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಹಿಂದೆ ಕ್ಷಯ ರೋಗಿಗಳನ್ನು ಬಹಿಷ್ಕರಿಸುವ ಮೂಢನಂಬಿಕೆಯಿತ್ತು. ಈಗ ಪತ್ತೆಯಾದ ರೋಗಿಗಳಲ್ಲಿ ಶೇ.83ರಷ್ಟು ಗುಣಮುಖರಾಗಿರುವುದು ವೈದ್ಯರ ಶ್ರಮದಿಂದ’ ಎಂದು ಅಭಿನಂದಿಸಿದರು.
‘ನಾಗರಿಕ ಸಮಾಜ ಪ್ರಬುದ್ಧತೆಯಿಂದ ಚಿಂತಿಸಬೇಕು. ಆರೋಗ್ಯ ಶಿಕ್ಷಣದ ಅರಿವು ಪಡೆದುಕೊಂಡರೆ ರೋಗಗಳ ನಿಯಂತ್ರಣ ಸುಲಭವಾಗುತ್ತದೆ. ರೋಗ ಬರುವ ಮುನ್ನವೇ ನಿಯಂತ್ರಿಸಿದರೆ ಚಿಕಿತ್ಸೆ ನೀಡಲು ತಗಲುವ ಹಣ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು’ ಎಂದರು.
‘ಜೀವನವನ್ನು ಉತ್ತಮ ರೀತಿಯಲ್ಲಿ ಪ್ರೇರೇಪಿಸುವ ವಿಷಯವೇ ಜ್ಞಾನ. ಇಂತಹ ಜ್ಞಾನದ ಸಹಾಯದಿಂದ ಕನಿಷ್ಠ ಪ್ರಯತ್ನ ಮಾಡಿದರೆ ಎಲ್ಲರೂ ಜ್ಞಾನಿಗಳಾಗಬಹುದು. ರೋಗದ ಅರಿವು ಪಡೆದು ಅದನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಮಾತನಾಡಿ, ‘ಕ್ಷಯ ರೋಗ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಪಣ ತೊಡಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ 2013ರಲ್ಲಿ 653 ಕ್ಷಯ ರೋಗ ಪ್ರಕರಣಗಳು ಪತ್ತೆಯಾಗಿದ್ದರೆ, 2018ರಲ್ಲಿ 871 ಪತ್ತೆಯಾಗಿವೆ. ಕ್ಷಯ ರೋಗ ತಪಾಸಣೆಗೆ ಒಳಪಟ್ಟವರಿಗಿಂತ ಅರ್ಧಕ್ಕೂ ಹೆಚ್ಚು ಜನರನ್ನು ಬಿಟ್ಟಿರುವ ಸಾಧ್ಯತೆ ಇದೆ’ ಎಂದು ವಿಷಾದಿಸಿದರು.
‘ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಟ್ಟು ಹೋಗಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಅರ್ಧಕ್ಕೆ ಚಿಕಿತ್ಸೆ ನಿಲ್ಲಿಸಿದವರಿಗೆ ಮತ್ತೆ ಚಿಕಿತ್ಸೆ ಮುಂದುವರಿಸಿದರೆ 2025ರ ವೇಳೆಗೆ ಜಿಲ್ಲೆ ಕ್ಷಯರೋಗ ಮುಕ್ತ’ ಎಂದು ಘೋಷಣೆ ಆಗುತ್ತದೆ’ ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ,ಜಿ.ಜಗದೀಶ್ ಮಾತನಾಡಿ, ‘ಜಿಲ್ಲೆಯಲ್ಲಿ 14,085 ಜನರನ್ನು ಕ್ಷಯರೊಗ ತಪಾಸಣೆಗೆ ಒಳಡಿಸಲಾಗಿದ್ದು, 871 ಜನರಲ್ಲಿ ರೋಗ ಪತ್ತೆಯಾಗಿದೆ. 219 ಶ್ವಾಸಕೋಶದ ಕ್ಷಯ, 356 ಶ್ವಾಸಕೋಶ ಬಿಟ್ಟು ಇತರೆ ಕ್ಷಯ ಪ್ರಕರಣವಿದೆ’ ಎಂದು ವಿವರಿಸಿದರು.
‘ಇವರಲ್ಲಿ 187 ಜನರಿಗೆ ಪುನರ್ ಚಿಕಿತ್ಸೆ ಆರಂಭಿಸಲಾಗಿದೆ. 2017ರಲ್ಲಿ 1,421 ಮಂದಿ ಗುಣಮುಖರಾಗಿದ್ದಾರೆ, 153 ಮಂದಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕ್ಷಯರೋಗ ನಿಯಂತ್ರಣ ಸಂಬಂಧ ವಿವಿಧ ಕಾಲೇಜುಗಳ ನರ್ಸಿಂಗ್ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ರಾಷ್ಟ್ರೀಯ ಕ್ಷಯ ರೋಗ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಶಾಜೀಯಾ ಅಂಜುಂ, ಆರ್‌ಎಲ್ ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮಯ್ಯ, ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಪ್ಯಾರಾಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲೆ ವಿಜಯಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.