ADVERTISEMENT

ಬಂಗಾರಪೇಟೆ | ಯರಗೋಳ್ ಜಲಾಶಯ: ಕಂದುಬಣ್ಣಕ್ಕೆ ತಿರುಗಿದ ನೀರು; ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 7:04 IST
Last Updated 8 ನವೆಂಬರ್ 2024, 7:04 IST
<div class="paragraphs"><p>ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಜಲಾಶಯದ ಹಿನ್ನೀರು</p></div>

ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಜಲಾಶಯದ ಹಿನ್ನೀರು

   

ಬಂಗಾರಪೇಟೆ: ಬಂಗಾರಪೇಟೆ ಸೇರಿದಂತೆ ಮೂರು ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ‘ಯರಗೋಳ್ ಜಲಾಶಯ’ದಿಂದ ಸರಬರಾಜು ಆಗುತ್ತಿರುವ ನೀರು ತಳದಲ್ಲಿ ಕಂದು ಬಣ್ಣಕ್ಕೆ ತಿರುಗಿದ್ದು, ನಾಗರಿಕರು ಆತಂಕಕ್ಕೆ ಸಿಲುಕಿದ್ದಾರೆ. 

ತಾಲ್ಲೂಕಿನಲ್ಲಿ ಯರಗೋಳ್ ಡ್ಯಾಂ ಕುಡಿಯುವ ನೀರಿನ ಯೋಜನೆಗೆ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅಂದಿನಿಂದ ಈ ಜಲಾಶಯದ ನೀರನ್ನು ಪುರಸಭೆಯ ವತಿಯಿಂದ ಶುದ್ಧೀಕರಿಸಿ ಜನರಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ನೀಗಿದೆ. ಯರಗೋಳ್ ನೀರು ನೋಡಲು ಯಾವುದೇ ಕಲುಷಿತವಾಗಿರದಂತೆ ಕಾಣುತ್ತದೆ. ಆದರೆ ಬಕೆಟ್ ಅಥವಾ ಬಿಂದಿಗೆಗಳಲ್ಲಿ ಸಂಗ್ರಹಿಸಿದಾಗ ತಳದಲ್ಲಿ ನೀರು ಕಂದು ಬಣ್ಣಕ್ಕೆ ತಿರುಗಿದಂತೆ ಕಂಡುಬರುತ್ತಿದೆ. ಇದನ್ನು ಕಂಡು ನಾಗರಿಕರು ಗಾಬರಿಯಾಗಿದ್ದಾರೆ. 

ADVERTISEMENT

ಅಲ್ಲದೆ, ಈ ನೀರನ್ನು ಸಂಗ್ರಹಿಸಲಾದ ಸಂಪ್, ಸಿಂಟೆಕ್ಸ್ ಸಹ ತಳದಲ್ಲಿ ಕಂದುಬಣ್ಣ ಕಂಡುಬರುತ್ತಿದೆ. ಜೊತೆಗೆ ಈ ನೀರು ಪೂರೈಕೆಯಾದ ಅವಧಿಯಿಂದ ಈವರೆಗೆ ಎರಡು ತಿಂಗಳಿಗೊಮ್ಮೆ ಮನೆಯಲ್ಲಿರುವ ನೀರಿನ ಶುದ್ಧೀಕರಣಗಳು ಹಾನಿಗೀಡಾಗುತ್ತಿವೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಪುರಸಭೆ ಅಧಿಕಾರಿಗಳನ್ನು ನಾಗರಿಕರು ಪ್ರಶ್ನಿಸಿದ್ದಾರೆ. ಇದಕ್ಕೆ ಈ ನೀರಿನಿಂದ ಯಾವುದೇ ಸಮಸ್ಯೆ ಇಲ್ಲ. ಪ್ರಾರಂಭದಲ್ಲಿ ನೀರು ಹಾಗೆ ಇರುತ್ತದೆ. ನಂತರದ ದಿನಗಳಲ್ಲಿ ನೀರು ತಿಳಿಯಾಗಲಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು ಎಂದು ಗೊತ್ತಾಗಿದೆ. 

ಯರಗೋಳ್ ಮತ್ತು ಬೋರ್‌ವೆಲ್ ನೀರನ್ನು ಮಿಶ್ರಣ ಮಾಡಿ ಸರಬರಾಜು ಮಾಡಿದಾಗ ಯಾವುದೇ ಸಮಸ್ಯೆ ಕಂಡಿರಲಿಲ್ಲ. ಯರಗೋಳ್ ನೀರು ವಾರಕ್ಕೆ ಮೂರು ದಿನ ಸರಬರಾಜು ಮಾಡಿದಾಗ ಮಾತ್ರ ಸಮಸ್ಯೆ ಕಾಣುತ್ತಿದೆ ಎಂಬ ಆರೋಪವೂ ಇದೆ. ಯರಗೋಳ್ ನೀರು ಕಂದು ಬಣ್ಣಕ್ಕೆ ತಿರುಗುತ್ತಿರುವುದರಿಂದ ಈ ನೀರು ಬಳಸಲು ನಾಗರಿಕರು ಭಯಪಡುತ್ತಿದ್ದಾರೆ. 

ಪಟ್ಟಣದ ಶಾಂತಿನಗರದ ಶಿಕ್ಷಕ ಮಂಜುನಾಥ್ ಎಂಬುವರು ತಮ್ಮ ಮನೆಗೆ ಪೂರೈಕೆಯಾದ ನೀರು ತಳದಲ್ಲಿ ಕಂದ ಬಣ್ಣದಲ್ಲಿರುವುದನ್ನು ಪತ್ರಕರ್ತರಿಗೆ ತೋರಿಸಿದರು. ಅದೇ ರೀತಿ ಪಟ್ಟಣದ ಎಲ್ಲ ಮನೆಗಳಿಗೆ ಸರಬರಾಜು ಆಗುತ್ತಿದೆಯಾಗಿದೆ. ಆದರೆ, ನಾಗರಿಕರು ಯಾರೂ ಸಹ ಪ್ರಶ್ನಿಸುವ ಧೈರ್ಯ ತೋರದೆ, ಮೌನಕ್ಕೆ ಶರಣಾಗಿದ್ದಾರೆ. 

ಈ ಕುರಿತು ಶಿಕ್ಷಕ ಮಂಜುನಾಥ್, ಯರಗೋಳ್ ಜಲಾಶಯದ ನೀರು ಶುದ್ಧೀಕರಿಸಿದ್ದರೆ, ನೀರು ಯಾಕೆ ಕಂದುಬಣ್ಣಕ್ಕೆ ತಿರುಗುತ್ತಿದೆ ಎಂದು ಪ್ರಶ್ನಿಸಿ, ಸಾಮಾಜಿಕ ಜಾಲತಾಣದಲ್ಲಿ ಕಂದುಬಣ್ಣಕ್ಕೆ ತಿರುಗಿದ ನೀರಿನ ವಿಡಿಯೊ ಹಾಕಿದ್ದಾರೆ. ಆ ಬಳಿಕ ಇತರ ನಾಗರಿಕರು ತಮ್ಮ ಮನೆಯಲ್ಲೂ ಇದೇ ಪರಿಸ್ಥಿತಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಯರಗೋಳ ಜಲಾಶಯದಿಂದ ಜನರಿಗೆ ಪೂರೈಕೆಯಾಗುತ್ತಿರುವ ನೀರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಮಸ್ಯೆ ಕಂಡುಬಂದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ರವಿ, ಪುರಸಭೆ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.