ADVERTISEMENT

ಯರಗೋಳ್‌ ಡ್ಯಾಂ ವಾರದಲ್ಲಿ ಪೂರ್ಣ: ಶಾಸಕ ಕೆ. ಶ್ರೀನಿವಾಸಗೌಡ

ನಗರಸಭೆ ಸಾಮಾನ್ಯ ಸಭೆಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 13:26 IST
Last Updated 29 ಡಿಸೆಂಬರ್ 2020, 13:26 IST
ಕೋಲಾರದಲ್ಲಿ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಪಾಲ್ಗೊಂಡರು.
ಕೋಲಾರದಲ್ಲಿ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಪಾಲ್ಗೊಂಡರು.   

ಕೋಲಾರ: ‘ಯರಗೋಳ್‌ ಡ್ಯಾಂ ಕಾಮಗಾರಿ ವಾರದೊಳಗೆ ಪೂರ್ಣಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ವರುಣ ದೇವ ಕೃಪೆ ತೋರಿದರೆ ಯರಗೋಳ್‌ ಯೋಜನೆಯಿಂದ ಜಿಲ್ಲೆಯ 3 ತಾಲ್ಲೂಕುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ನಡೆದ ನಗರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಯರಗೋಳ್‌ ಡ್ಯಾಂ ಭರ್ತಿಯಾಗಲು ಉತ್ತಮ ಮಳೆಯಾಗಬೇಕು. ಈ ಹಿಂದೆ ಅಳವಡಿಸಿರುವ ಪೈಪ್‌ಲೈನ್‌ ಸ್ಥಿತಿಯ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ರಾಜಕಾರಣ ಚುನಾವಣೆಗೆ ಸೀಮಿತವಾಗಬೇಕು. ಚುನಾವಣೆ ಬಳಿಕ ಅಭಿವೃದ್ಧಿಯು ಎಲ್ಲರ ಮೂಲಮಂತ್ರವಾಗಬೇಕು. ಜಿಲ್ಲಾ ಕೇಂದ್ರ ಕೋಲಾರದ ಪರಿಸ್ಥಿತಿ ಸದ್ಯ ನಗರವೂ ಅಲ್ಲ, ಹಳ್ಳಿಯೂ ಅಲ್ಲ ಎಂಬಂತಾಗಿದೆ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ನಗರಸಭೆ ಆಡಳಿತ ಯಂತ್ರವು ಮುಂದೆ ಆಗಬೇಕಿರುವ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಟೇಕಲ್ ರಸ್ತೆ ಬಂದ್ ಮಾಡಿ ಧರಣಿ ನಡೆಸಿದರೂ ವಾರ್ಡ್‌ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಆದರೂ ತೆರಿಗೆ ವಸೂಲಿ ಮಾಡಲಾಗುತ್ತಿದೆ. 16ನೇ ವಾರ್ಡ್‌ಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿರುವುದಾಗಿ ₹ 67 ಸಾವಿರ ಬಿಲ್ ಮಾಡಲಾಗಿದೆ. ಯಾರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದೀರಿ? ಸಭೆಗೆ ಸೂಕ್ತ ಮಾಹಿತಿ ಕೊಡದಿದ್ದರೆ ಎಸ್ಸಿ ಸೆಲ್‌ಗೆ ದೂರು ನೀಡುತ್ತೇನೆ’ ಎಂದು ಸದಸ್ಯ ರಾಕೇಶ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಶ್ರೀಕಾಂತ್, ‘ನೀರಿನ ಸಮಸ್ಯೆ ಗಂಭೀರವಾಗಿದ್ದ ಕಾರಣ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಬಿಲ್ ಮಾಡಿರುವುದು ನಿಜ. ನೀರು ಪೂರೈಕೆಯಾಗದ ಮನೆಗಳವರು ಅರ್ಜಿ ಸಲ್ಲಿಸಿ ನಲ್ಲಿ ಸಂಪರ್ಕ ತೆಗೆಸಬಹುದು. ನಲ್ಲಿ ಸಂಪರ್ಕ ಕಡಿತಗೊಳಿಸದಿದ್ದರೆ ತೆರಿಗೆ ಕಟ್ಟಲೇಬೇಕು’ ಎಂದರು. ಆಗ ಸದಸ್ಯರು ಮತ್ತು ಆಯುಕ್ತರ ನಡುವೆ ವಾಗ್ವಾದ ನಡೆಯಿತು.

ದಲ್ಲಾಳಿಗಳ ಹಾವಳಿ: ‘ನಗರಸಭೆ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಜನಸಾಮಾನ್ಯರ ಯಾವುದೇ ಕೆಲಸ ಆಗಬೇಕಾದರೆ ದಲ್ಲಾಳಿಗಳ ಮೂಲಕ ಬಂದು ಅಧಿಕಾರಿಗಳಿಗೆ ಲಂಚ ಕೊಡಬೇಕಿದೆ. ಕಚೇರಿ ಸಿಬ್ಬಂದಿಗೆ ಸದಸ್ಯರ ಮಾತು ಕೇಳುವಷ್ಟು ಸೌಜನ್ಯವಿಲ್ಲ’ ಎಂದು ರಾಕೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಸದಸ್ಯ ಎಸ್.ಆರ್.ಮುರಳಿಗೌಡ, ‘ಜನನ, ಮರಣ ಪ್ರಮಾಣಪತ್ರ ನೀಡುವ ಶಾಖೆಯಲ್ಲಿ ಹೊರಗುತ್ತಿಗೆಯ ಒಬ್ಬರೇ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರು ದಾಖಲೆಪತ್ರ ಹುಡುಕಲು ಮೂರ್ನಾಲ್ಕು ದಿನವಾಗುತ್ತಿದೆ. ಅದಕ್ಕೂ ದಲ್ಲಾಳಿಗಳ ಮೂಲಕ ಬರಬೇಕಿದೆ. ನಗರಸಭೆಯಲ್ಲಿ 384 ಹುದ್ದೆ ಖಾಲಿಯಿವೆ. ಶಾಸಕರ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಖಾಲಿ ಹುದ್ದೆ ಭರ್ತಿ ಮಾಡಿಸಬೇಕು’ ಎಂದು ಒತ್ತಾಯಿಸಿದರು.

ನಿರುತ್ಸಾಹ ಸರಿಯಲ್ಲ: ‘ಜನರು ನಮ್ಮ ಮೇಲೆ ಗೌರವವಿಟ್ಟು ಆಯ್ಕೆ ಮಾಡಿದ್ದಾರೆ. ಜನರ ನಂಬಿಕೆಗೆ ತಕ್ಕಂತೆ ನಗರವನ್ನು ಅಭಿವೃದ್ಧಿಪಡಿಸಬೇಕು. ಆದರೆ, ನಗರಸಭೆಯ ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿರುತ್ಸಾಹ ಸರಿಯಲ್ಲ. ಇನ್ನಾದರೂ ನಮ್ಮೊಂದಿಗೆ ಸಹಕರಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ ಸೂಚಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಮತ್ತು ನಗರಸಭೆ ಪೌರಕಾರ್ಮಿಕ ಮಾರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಭೆಯ ಅಜೆಂಡಾದಲ್ಲಿನ 54 ವಿಷಯಗಳ ಬಗ್ಗೆ ಚರ್ಚಿಸಲಾಯಿತು. ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಮತ್ತು ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.