ADVERTISEMENT

ಎತ್ತಿನಹೊಳೆ ಕಾಮಗಾರಿ ಶೀಘ್ರ ಪೂರ್ಣ: ಪ್ರವಾಸೋದ್ಯಮ ಸಚಿವ ಯೋಗೇಶ್ವರ್‌ ಭರವಸೆ

ಗಣರಾಜ್ಯೋತ್ಸವ ಭಾಷಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 11:45 IST
Last Updated 26 ಜನವರಿ 2021, 11:45 IST
ಕೋಲಾರದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಮಾತನಾಡಿದರು.
ಕೋಲಾರದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಮಾತನಾಡಿದರು.   

ಕೋಲಾರ: ‘ಎತ್ತಿನಹೊಳೆ ಯೋಜನೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಜಿಲ್ಲೆಗೆ ಕುಡಿಯುವ ನೀರು ಒದಗಿಸುತ್ತೇವೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಭರವಸೆ ನೀಡಿದರು.

ಇಲ್ಲಿ ಮಂಗಳವಾರ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ‘ಈಗಾಗಲೇ ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿದು ಬಂದಿದ್ದು, ಸಾಕಷ್ಟು ಕೆರೆಗಳು ತುಂಬಿವೆ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಜಿಲ್ಲೆಯ ಕುಡಿಯುವ ನೀರಿನ ಬವಣೆ ನೀಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯ ರೈತರು ನೀರಿನ ಸಮಸ್ಯೆ ನಡುವೆಯೂ ಸಂಕಷ್ಟ, ಸವಾಲುಗಳಿಗೆ ಎದೆಯೊಡ್ಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇಡೀ ನಾಡಿಗೆ ಮಾದರಿಯಾಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದು ಸುದೈವ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ದಿನವಾದ ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ’ ಎಂದರು.

ADVERTISEMENT

‘ಗಂಗರ ರಾಜಧಾನಿಯಾಗಿದ್ದ ಕೋಲಾರವನ್ನು ಚೋಳರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು ಮೈಸೂರು ಅರಸರು ಆಳಿದ್ದಾರೆ. ಜಿಲ್ಲೆಯ ಮುಳಬಾಗಿಲಿನ ಐತಿಹಾಸಿಕ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿರುವುದು ಈ ನೆಲದ ಶಕ್ತಿಗೆ ನಿದರ್ಶನ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗಳಿಕೆ ಜಿಲ್ಲೆಯದು’ ಎಂದು ಬಣ್ಣಿಸಿದರು.

‘ಜಗತ್ತಿಗೆ ಚಿನ್ನದ ನೀಡಿದ ಕೋಲಾರ ಜಿಲ್ಲೆಯು ಹಾಲು, ರೇಷ್ಮೆ ಮತ್ತು ಮಾವು ಉತ್ಪಾದನೆಗೆ ಹೆಸರಾಗಿದೆ. ಜಿಲ್ಲೆಯು ವಿಶ್ವೇಶ್ವರಯ್ಯ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಅವರಂತಹ ಮೇಧಾವಿಗಳು, ಸಾಹಿತಿಗಳು, ಕವಿಗಳಿಗೆ ಜನ್ಮ ನೀಡಿದೆ. ನಾಡಿನ ಕೃಷಿ, ಸಾಹಿತ್ಯ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶಕ್ಕೆ ಮಾದರಿ: ‘ಕೃಷಿ, ಪಶು ಸಾಕಾಣಿಕೆ, ಕುಕ್ಕುಟೋದ್ಯಮ, ಪುಷ್ಪೋದ್ಯಮ ಮತ್ತು ರೇಷ್ಮೆ ಉದ್ಯಮದ ಮೂಲಕ ಜಿಲ್ಲೆಯ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಅಡಿ ಆಳದಿಂದ ಅಂತರ್ಜಲ ತೆಗೆದು ಇಸ್ರೆಲ್ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿರುವ ರೈತರು ದೇಶಕ್ಕೆ ಮಾದರಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.

‘ಜಿಲ್ಲೆಯು ಹಲವು ಸಾಮಾಜಿಕ ಹೋರಾಟಗಳ ಕರ್ಮಭೂಮಿ. ಜಿಲ್ಲೆಯು ದಲಿತ ಸಾಹಿತಿಗಳು, ಹೋರಾಟಗಾರರು, ಶ್ರೇಷ್ಠ ಆಡಳಿತಗಾರರನ್ನು ಕೊಡುಗೆಯಾಗಿ ನೀಡಿದೆ. ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಕೋಲಾರ ಪ್ರಮುಖ ಸ್ಥಾನದಲ್ಲಿದೆ. ಜತೆಗೆ ಕೈಗಾರಿಕಾಭಿವೃದ್ಧಿಯಲ್ಲೂ ಜಿಲ್ಲೆಯು ಮುಂಚೂಣಿಯಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ತಹಶೀಲ್ದಾರ್‌ ಶೋಭಿತಾ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.