ADVERTISEMENT

ಶ್ರೀನಿವಾಸಪುರ | ವಿವೇಕಾನಂದರ ಆದರ್ಶ ಪಾಲಿಸಿ: ಎಂ. ವೇಮಣ್ಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 6:12 IST
Last Updated 13 ಜನವರಿ 2023, 6:12 IST
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಉಪಾಧ್ಯಕ್ಷ ಎಂ. ವೇಮಣ್ಣ ಮಾತನಾಡಿದರು
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಉಪಾಧ್ಯಕ್ಷ ಎಂ. ವೇಮಣ್ಣ ಮಾತನಾಡಿದರು   

ಶ್ರೀನಿವಾಸಪುರ: ‘ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು. ಜ್ಞಾನಾರ್ಜನೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಉಪಾಧ್ಯಕ್ಷ ಎಂ. ವೇಮಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಯುವಜನರು ದೇಶದ ನಿಜವಾದ ಶಕ್ತಿ. ತಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವು ದೇಶದ ಅಭಿವೃದ್ಧಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು
ಹೇಳಿದರು.

ADVERTISEMENT

ಮುಖ್ಯಶಿಕ್ಷಕ ಎಂ. ಬೈರೇಗೌಡ ಮಾತನಾಡಿ, ಮನುಷ್ಯ ಎಷ್ಟು ಕಾಲ ಜೀವಿಸುತ್ತಾನೆ ಎಂಬುದು ಮುಖ್ಯವಲ್ಲ. ತನ್ನ ಜೀವಿತಾವಧಿಯಲ್ಲಿ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾನೆ ಎಂಬುದು ಮುಖ್ಯ ಎಂದರು.

ಸ್ವಾಮಿ ವಿವೇಕಾನಂದರು 39 ವರ್ಷ ಜೀವಿಸಿದ್ದರೂ ವಿಶ್ವಮಾನ್ಯರಾದರು. ಅವರ ಚಿಂತನೆಗಳು ಜಗತ್ತಿನ ಗಮನ ಸೆಳೆದವು. ಸರ್ವ ಜನಾಂಗದ ಗೌರವಕ್ಕೆ ಪಾತ್ರರಾದ ಅವರು ಯುವ ಸಮುದಾಯಕ್ಕೆ ಸಾರ್ವಕಾಲಿಕ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ಕನಸು ನನಸಾಗಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಚಟುವಟಿಕೆ ಕೈಗೊಳ್ಳಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಗಮನ ನೀಡಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಆನಂದ ರೆಡ್ಡಿ, ಶಿಕ್ಷಕರಾದ ರಾಮಚಂದ್ರ, ನಾಗರಾಜ್, ನಾರಾಯಣಸ್ವಾಮಿ, ಪ್ರಸನ್ನಕುಮಾರ್, ಚೇತನ್, ಭಾರ್ಗವ್, ಮುಸ್ಕಾನ್, ಶಿಕ್ಷಕಿಯರಾದ ವಿಜಯಮ್ಮ, ರೆಡ್ಡಮ್ಮ, ಗೀತಾಂಜಲಿ, ಶ್ರೀದೇವಿ, ಶಶಿಕಲಾ, ಗೌರಮ್ಮ, ಅಶ್ವಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.