ADVERTISEMENT

ಮರಕುಂಬಿ ಗ್ರಾಮಕ್ಕೆ ಸಂಗಣ್ಣ ಕರಡಿ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 6:51 IST
Last Updated 1 ಸೆಪ್ಟೆಂಬರ್ 2014, 6:51 IST
ಗಂಗಾವತಿ ತಾಲ್ಲೂಕಿನ ಮರಕುಂಬಿಗೆ ಭಾನುವಾರ ಭೇಟಿ ನೀಡಿದ ಸಂಸದ ಸಂಗಣ್ಣ ಕರಡಿ ಜೊತೆ ಮಹಿಳೆಯರು ಚರ್ಚಿಸಿದರು
ಗಂಗಾವತಿ ತಾಲ್ಲೂಕಿನ ಮರಕುಂಬಿಗೆ ಭಾನುವಾರ ಭೇಟಿ ನೀಡಿದ ಸಂಸದ ಸಂಗಣ್ಣ ಕರಡಿ ಜೊತೆ ಮಹಿಳೆಯರು ಚರ್ಚಿಸಿದರು   

ಗಂಗಾವತಿ: ಜಾತಿ ಸಂಘರ್ಷಕ್ಕೆ ನಲುಗಿದ ತಾಲ್ಲೂಕಿನ ಕೇಸರಹಟ್ಟಿ ಗ್ರಾಮ ಪಂಚಾಯಿತಿಯ ಮರಕುಂಬಿ ಗ್ರಾಮಕ್ಕೆ ಭಾನುವಾರ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿದರು. ದಲಿತರ ಕೇರಿಯಲ್ಲಿ ಸುಟ್ಟ ಗುಡಿಸಲುಗಳನ್ನು  ಪರಿಶೀಲಿಸಿ ಸಂತ್ರಸ್ತರಿಗೆ ಸಂತ್ವಾನ ಹೇಳಿದರು.

ನಾಗಪ್ಪ ಪೂಜಾರಿ, ರುದ್ರಮ್ಮ  ಮಾತನಾಡಿ, ‘ಎರಡು ತಿಂಗಳಿಂದ ಊರು ಹೊತ್ತಿ ಉರಿಯುತ್ತಿದ್ದರೂ ಬಾರದೇ ಈಗ ಏಕೆ ಬಂದಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿ­ದರು. ಬೆಂಕಿಯಿಂದ ಹಾನಿಗೀಡಾದ ಮನೆಗಳನ್ನು ಸಂಸದರು ಪರಿಶೀಲಿಸಿದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತ ನೂರಾರು ಮಹಿಳೆ­ಯರು ಮಾಧ್ಯಮದವರನ್ನು ಇಲ್ಲಿಂದ  ಆಚೆ ಕಳುಹಿಸಿ ಎಂದು ಆಗ್ರಹಿಸಿದರು.

ಅಮಾಯಕರ ಮೇಲೆ ಪ್ರಕರಣ: ‘ದಲಿತ, ಸವರ್ಣೀಯರು ಸಹೋದರ­ರಂತೆ ಇದ್ದು, ಗಂಗಾಧರಯ್ಯ ಸ್ವಾಮಿ ಇಡೀ ಪ್ರಕರಣಕ್ಕೆ  ಕಾರಣರಾಗಿದ್ದಾರೆ. ಘಟನೆ ಸಂಬಂಧ ಊರಲ್ಲಿಲ್ಲದ ಹಾಗೂ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಮಲ್ಲಿಕಾರ್ಜುನ ಹಾಗೂ ಯಮನೂರಪ್ಪ ದೂರಿದರು.

ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು ಗಾಯಾಳುಗಳನ್ನು ವಿಚಾರಿಸಿದರು. ಬಳಿಕ ಸುದ್ದಿಗಾರ­ರೊಂದಿಗೆ ಮಾತನಾಡಿ, ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಕಾರಣ. ಪರಸ್ಪರ ಚರ್ಚಿಸಿ ಸೌಹಾರ್ದ ಸಭೆ ನಡೆಸಲಾಗುವುದು ಎಂದರು.

ಮಾಜಿ ಸಂಸದ ಶಿವರಾಮಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ, ತಿಪ್ಪೇರುದ್ರಸ್ವಾಮಿ, ಬಸವರಾಜ ದಢೇಸುಗೂರು, ಕೆ. ಸತ್ಯನಾರಾಯಣ, ಗಿರೇಗೌಡ, ಸತ್ಯನಾರಾಯಣ ದೇಶಪಾಂಡೆ, ಎಚ್. ಪ್ರಭಾಕರ, ಸಿದ್ದಾಪುರ ಮಂಜುನಾಥ, ಸಿಂಗನಾಳ ವಿರೂಪಾಕ್ಷಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.