ಕೊಪ್ಪಳ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಪ್ರಸಕ್ತ ವರ್ಷದ ಜನವರಿಯಿಂದ ಜೂನ್ 9 ರವರೆಗೆ ಜಿಲ್ಲೆಯಲ್ಲಿ ಸರಾಸರಿ 130 ಮಿ.ಮೀ. ಮಳೆಯಾಗಿದ್ದು, 2.52 ಲಕ್ಷ ಹೆಕ್ಟೇರ್ ನಷ್ಟು ಬಿತ್ತನೆಯ ಗುರಿ ಹೊಂದಲಾಗಿದೆ.
ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ರೈತರು ಉತ್ಸಾಹದಿಂದ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಹೊಲವನ್ನು ಸ್ವಚ್ಛ ಮಾಡಿಟ್ಟುಕೊಂಡು ಅಗತ್ಯ ಬೀಜ, ಗೊಬ್ಬರಗಳನ್ನು ಖರೀದಿಸಿದ್ದಾರೆ.
ಮೂರು, ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಬಿತ್ತನೆಗೆ ಪೂರಕವಾಗಿದೆ. ಕೊಪ್ಪಳ ತಾಲ್ಲೂಕಿನ ಹಿಟ್ನಾಳ, ಇರಕಲ್ಲಗಡ, ಅಳವಂಡಿ ಹೋಬಳಿಯಲ್ಲಿ 171 ಮಿ.ಮೀ ಮಳೆಯಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ನವಲಿ, ಹುಲಿಹೈದರ, ಕನಕಗಿರಿ, ಕಾರಟಗಿ, ಸಿದ್ದಾಪುರ, ವೆಂಕಟಗಿರಿ ಹೋಬಳಿಯಲ್ಲಿ 147 ಮಿ.ಮೀ ಮಳೆಯಾಗಿದೆ. ಕುಷ್ಟಗಿ ತಾಲ್ಲೂಕಿನ ಹನಮಸಾಗರ, ತಾವರಗೇರಾ ಹೋಬಳಿಯಲ್ಲಿ 100.2 ಮಿ.ಮೀ ಹಾಗೂ ಯಲಬುರ್ಗಾ ತಾಲ್ಲೂಕಿನ ಕುಕನೂರ, ಹಿರೇವಂಕಲಕುಂಟಾ, ಮಂಗಳೂರು ಹೋಬಳಿಯಲ್ಲಿ 91.1 ಮಿ.ಮೀ ಮಳೆಯಾಗಿದೆ.
ಕೊಪ್ಪಳ ತಾಲ್ಲೂಕಿನಲ್ಲಿ ಮಸಾರಿ, ಕಪ್ಪು ಮಣ್ಣಿನ ಪ್ರದೇಶವಿದ್ದು, ಹೆಸರು, ಉದ್ದು, ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಗಂಗಾವತಿ ಭಾಗದಲ್ಲಿ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ತುಂಗಭದ್ರ ಜಲಾಶಯದಿಂದ ನೀರು ಬಿಡುಗಡೆಗೆ ಕಾಯುತ್ತಿದ್ದು, ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಚ್ಚುಕಟ್ಟು ವ್ಯಾಪ್ತಿಯಲ್ಲಿ 35,000 ಹೆಕ್ಟರ್. ಬಿತ್ತನೆ ಪ್ರದೇಶವಿದ್ದು, ತುಂಗಭದ್ರಾ ಜಲಾಶಯದಿಂದ ಬಿಡುವ ನೀರು ಇಲ್ಲಿನ ರೈತರಿಗೆ ಆಧಾರವಾಗಿದೆ.
ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿಂದ ಈ ಭಾಗದಲ್ಲಿ ಅವಧಿಗಿಂತ ಮುಂಚೆ ವಾಣಿಜ್ಯ ಬೆಳೆಗಳಾದ ಹತ್ತಿ ಬಿತ್ತನೆ ಮಾಡಿದ್ದಾರೆ. ಮಳೆಯಾಶ್ರಿತ ಕೆಲವು ಪ್ರದೇಶಗಳಲ್ಲಿ ಶೇಂಗಾ, ತೊಗರಿ ಕೂಡಾ ಬಿತ್ತನೆ ಮಾಡುತ್ತಿರುವುದು ಕಂಡು ಬಂತು.
ಕುಷ್ಟಗಿ ತಾಲ್ಲೂಕು ಬಹುತೇಕ ಭಾಗ ಕೆಂಪು ಮಣ್ಣಿನ ಮಳೆಯಾಶ್ರಿತ ಜಮೀನಾಗಿದ್ದು, ಹೆಸರು, ಮಡಿಕೆ, ಉದ್ದು, ಸಜ್ಜೆ, ಹೈಬ್ರಿಡ್ ಜೋಳವನ್ನು ಬಿತ್ತನೆ ಮಾಡಿದ್ದಾರೆ. ಯಲಬುರ್ಗಾ ತಾಲ್ಲೂಕು ಕಪ್ಪು ಮಣ್ಣಿ ಎರಿ ಜಮೀನು ಪ್ರದೇಶವಾಗಿದ್ದು, ಎರಡು ಉತ್ತಮ ಮಳೆ ಸುರಿದರೆ ಹೆಸರು ಬೆಳೆ ಕೈಹಿಡಿಯಲಿದೆ. ತೊಗರಿ, ಸಜ್ಜೆಯನ್ನು ಹೆಚ್ಚಿನ ಪ್ರಮಾಣ ಬಿತ್ತನೆ ಮಾಡಿದ್ದಾರೆ.
ಮುಂಗಾರು ಉತ್ತಮ ಆರಂಭವಾಗಿದ್ದು, ಈ ವರ್ಷದ ಬೆಳೆ ಕೈಸೇರುವ ನಿರೀಕ್ಷೆ ರೈತರದ್ದಾಗಿದೆ. ಸತತ ಬರಗಾಲದಿಂದ ಕಂಗೆಟ್ಟಿರುವ ರೈತ ಸಮುದಾಯ ಈ ಬಾರಿ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆಯಲ್ಲಿ ಇದ್ದಾರೆ.
‘ನಕಲಿ ಬೀಜ ಪೂರೈಸಿದರೆ ಕಠಿಣ ಕ್ರಮ’
ಗುಣಮಟ್ಟದ ಬೀಜ ಖರೀದಿಗೆ ಸಲಹೆ ನೀಡಿರುವ ಇಲಾಖೆ, ನಕಲಿ ಬೀಜ ಪೂರೈಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ರೈತರಿಗೆ ಅಗತ್ಯ ಇರುವ ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರದ ಮೂಲಕ ಪೂರೈಸಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವೀರೇಶ ಹುನಗುಂದ ತಿಳಿಸಿದರು.
ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರದ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಅಗತ್ಯ ಮಾಹಿತಿ ನೀಡಲು ಕೃಷಿ ಇಲಾಖೆ ಸಜ್ಜಾಗಿದ್ದು, ಇಲಾಖೆಯನ್ನು ಸಂಪರ್ಕಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.