ADVERTISEMENT

ಹನಿ ನೀರಾವರಿ: ಉತ್ತಮ ಫಸಲು

ಎ.ನಾರಾಯಣರಾವ ಕುಲಕರ್ಣಿ
Published 19 ನವೆಂಬರ್ 2017, 6:44 IST
Last Updated 19 ನವೆಂಬರ್ 2017, 6:44 IST
ಕುಷ್ಟಗಿ ತಾಲ್ಲೂಕು ಹುಲ್ಸಗೇರಿ ರೈತ ಮೆಹಬೂಬ್‌ಸಾಬ್‌ ನರೆಗಲ್‌ ಜಮೀನಿನ ತೊಗರಿ ಬೆಳೆಗೆ ಹನಿ ನೀರಾವರಿ ಅಳವಡಿಸಿರುವುದು
ಕುಷ್ಟಗಿ ತಾಲ್ಲೂಕು ಹುಲ್ಸಗೇರಿ ರೈತ ಮೆಹಬೂಬ್‌ಸಾಬ್‌ ನರೆಗಲ್‌ ಜಮೀನಿನ ತೊಗರಿ ಬೆಳೆಗೆ ಹನಿ ನೀರಾವರಿ ಅಳವಡಿಸಿರುವುದು   

ಕುಷ್ಟಗಿ: ತೊಗರಿ ಈವರೆಗೂ ಮಳೆ ಆಶ್ರಿತ ಜಮೀನಿಗೆ ಮಾತ್ರ ಸೀಮಿತವಾಗಿತ್ತು. ಮಳೆಯ ಅನಿಶ್ಚಿತತೆಯಿಂದ ಬೆಳೆ ಕೈಕೊಟ್ಟಿದ್ದೇ ಹೆಚ್ಚು. ಅವಶ್ಯಕತೆ ಆವಿಷ್ಕಾರಕ್ಕೆ ಕಾರಣ ಎನ್ನುವಂತೆ ರೈತರು ತೊಗರಿಯನ್ನು ಲಾಭದಾಯಕವನ್ನಾಗಿಸಿಕೊಳ್ಳಲು ಹೊಸ ಪ್ರಯೋಗಗಳತ್ತ ಆಸಕ್ತಿ ವಹಿಸುತ್ತಿರುವುದು ಕಂಡುಬಂದಿದೆ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿ ಕೊಂಡಿರುವ ತಾಲ್ಲೂಕಿನ ಹುಲ್ಸಗೇರಿಯ ರೈತ ಮೆಹಬೂಬ್‌ಸಾಬ್ ನರೇಗಲ್‌ ಕೊಪ್ಪಳ ಜಿಲ್ಲೆಯಲ್ಲಿಯೇ ಮೊದಲಿಗರು.

ಮಧ್ಯಪ್ರದೇಶದ ಪ್ರಗತಿಪರ ರೈತ ರಾಠೋಡ ಅವರಂತಹ ರೈತರೊಂದಿಗೆ ಸಂಪರ್ಕ ಬೆಳೆಸಿ ಅವರಿಂದ ‘ರೀಚಾ–2000’ ಎಂಬ ಹೊಸ ತಳಿ ತೊಗರಿಯನ್ನು ಮೂರು ಎಕರೆ ಜಮೀನಿನಲ್ಲಿ ನಾಟಿ ಮಾಡಿರುವ ಮೆಹಬೂಬ್‌ಸಾಬ್‌ ದುಬಾರಿ ಬೇಸಾಯಕ್ಕೆ ಕೈಹಾಕಿದ್ದಾರೆ.

ಸುಮಾರು ಆರು ಅಡಿಗಿಂತಲೂ ಅಧಿಕ ಎತ್ತರದಲ್ಲಿ ಬೆಳೆದಿದ್ದ ತೊಗರಿ ಕಾಯಿಕಟ್ಟಿದೆ. ಇನ್ನೂ ಸಾಕಷ್ಟು ಹೂವುಗಳೂ ಇವೆ. ಹಾಗಾಗಿ ಈಗ ಕಾಯಿಗಳೇ ಭಾರವಾಗಿವೆ. ಗಿಡಗಳು ಭೂಮಿಯತ್ತ ಬಾಗಿದ್ದು ರೈತ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ತೊಗರಿ ಇಡೀ ಬೆಳೆಯಾಗಿದೆ. ಸಾಲಿನಿಂದ ಸಾಲಿಗೆ ಆರು ಅಡಿ ಮತ್ತು ಗಿಡದಿಂದ ಗಿಡಕ್ಕೆ ಮೂರು ಅಡಿ ಅಂತರದಲ್ಲಿ ಸಣ್ಣ ಸಣ್ಣ ಗುಣಿ ತೋಡಿ, ಮೂರು ಎಕರೆಗೆ ಒಟ್ಟು 7,000 ಬೀಜ (ಅಂದಾಜು ಒಂದು ಕೆ.ಜಿ) ನಾಟಿ ಮಾಡಿದ್ದಾರೆ. ಅಂದಾಜು ₹ 1 ಲಕ್ಷ ವೆಚ್ಚದಲ್ಲಿ ಹನಿ ನೀರಾವರಿ ಸಲಕರಣೆಗಳನ್ನು ಅಳವಡಿಸಲಾಗಿದೆ.

ಅನುಕೂಲ ಹೀಗೆ: ಕಡಿಮೆ ನೀರು, ಕೆಲವೇ ತಾಸುಗಳಿರುವ ವಿದ್ಯುತ್‌ನಲ್ಲಿ ಇಡೀ ಹೊಲಕ್ಕೆ ಒಂದು ದಿನದಲ್ಲಿ ನೀರುಣಿಸಬಹುದು. ವಾರದವರೆಗೂ ತೇವಾಂಶ ಇರುತ್ತದೆ. ನೀರು ಹರಿಸಿದರೆ ಇಷ್ಟೇ ಜಮೀನಿಗೆ ಐದಾರು ದಿನಗಳು ಬೇಕಾಗುತ್ತದೆ. ಹನಿ ನೀರಾವರಿಯಿಂದ ಬೆಳೆಗೆ ಹದವರಿತು ನೀರು ಕೊಡಬಹುದು. ಹನಿ ನೀರಾವರಿಯಿಂದ ಭೂಮಿ ಬಿರುಸಾಗುವುದಿಲ್ಲ. ಕಳೆ ತೀರಾ ಕಡಿಮೆ ಇರುತ್ತದೆ. ಉಳಿದ ನೀರನ್ನು ಇತರ ಬೆಳೆಗಳಿಗೆ ಬಳಸುವುದಕ್ಕೆ ಅನುಕೂಲವಾಗುತ್ತದೆ ಎಂದು ರೈತ ಮೆಹಬೂಬ್‌ಸಾಬ್‌ ಹನಿ ನೀರಾವರಿಯ ಪ್ರಯೋಜನ ತಿಳಿಸಿದರು.

ವಿಜ್ಞಾನಿಗಳು ಹೇಳಿದ್ದು: ಹೆಚ್ಚು ನೀರು ಹರಿಸುವುದರಿಂದ ಹಲವಾರು ತೊಂದರೆಗಳು ಎದುರಾಗುತ್ತವೆ. ಮೇಲ್ಮಣ್ಣು ಸ್ಥಾನಪಲ್ಲಟಗೊಳ್ಳುತ್ತದೆ. ತೊಗರಿ ಬೆಳೆಗೆ ಬೇರು ಕೊಳೆಯುವ ರೋಗ, ಸೊರಗುರೋಗ, ಹುಳುಗಳ ಕಾಟವೂ ಹೆಚ್ಚು. ಇದರಿಂದ ರೈತರು ಹೆಚ್ಚು ಹಾನಿಗೊಳಗಾಗುತ್ತಾರೆ. ಅವಶ್ಯಕತೆಯಷ್ಟು ನೀರುಣಿಸು ವುದರಿಂದ ಭೂಮಿಯಲ್ಲಿನ ಫಲವತ್ತತೆ ಹಾಳಾಗುವುದಿಲ್ಲ. ಗಿಡಗಳು ಆರೋಗ್ಯವಾಗಿರುತ್ತವೆ. ಅಷ್ಟೇ ಅಲ್ಲ ಹೆಚ್ಚಿನ ರಾಸಾಯನಿಕ ಗೊಬ್ಬರದ
ಅಗತ್ಯ ಇರುವುದಿಲ್ಲ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ.ಎಂ.ಬಿ.ಪಾಟೀಲ ಹೇಳಿದರು.

ಸತತ ಪರಿಶ್ರಮ, ಬೇಸಾಯ ಕ್ರಮದಲ್ಲಿ ವೈಜ್ಞಾನಿಕ ಮತ್ತು ಪಾರಂಪರಿಕ ಅಂಶಗಳನ್ನು ಅಳವಡಿಸಿ ಕೊಂಡಿರುವುದರಿಂದ ತೊಗರಿ ಗಿಡಗಳ ತುಂಬಾ ಕಾಯಿಗಳು ಜೋತುಬಿದ್ದಿವೆ. ಹೊಸ ತಳಿ ತೊಗರಿ ಮತ್ತು ಹನಿ ನೀರಾವರಿ ಪ್ರಯೋಗದಿಂದಾಗಿ ಮೆಹಬೂಬ್‌ಸಾಬ್‌ ಅವರ ಬೆಳೆ ಈಗ ಸುತ್ತಲಿನ ರೈತರಲ್ಲಿನ ಆಸಕ್ತಿಗೆ ಕಾರಣವಾಗಿದೆ.

* * 

ವೈಜ್ಞಾನಿಕ ಬೇಸಾಯ ಕ್ರಮ ಅಳವಡಸಿಕೊಂಡರೆ ಕಡಿಮೆ ನೀರು, ಭೂಮಿಯಲ್ಲೂ ಉತ್ತಮ ಬೆಳೆ ಸಾಧ್ಯ.
ಡಾ.ಎ.ಬಿ.ಪಾಟೀಲ,
ಕೃಷಿ ವಿಜ್ಞಾನಿ. ಕೊಪ್ಪಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.