ADVERTISEMENT

ಗಂಗಾವತಿ | ಬಿಸಿಯೂಟ ಸೇವನೆ: 36 ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 16:08 IST
Last Updated 2 ಏಪ್ರಿಲ್ 2024, 16:08 IST
ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳ ಪೋಷಕರು
ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳ ಪೋಷಕರು   

ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ 36 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ಜರುಗಿದೆ.

ಪ್ರತಿನಿತ್ಯದಂತೆ ಮಂಗಳವಾರ ವಿದ್ಯಾರ್ಥಿಗಳು ಶಾಲೆಯಲ್ಲಿ ತಯಾರಿಸಿದ ಮಧ್ಯಾಹ್ನದ ಬಿಸಿಯೂಟವಾದ ಚಿತ್ರಾನ್ನವನ್ನು ಸೇವಿಸಿದ್ದರು. ಕೆಲ ಗಂಟೆಗಳ ನಂತರ ಮಕ್ಕಳಲ್ಲಿ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿತ್ತು. ಕೂಡಲೇ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪಾಲಕರು ಆಸ್ಪತ್ರೆಯತ್ತ ಧಾವಿಸಿ, ಶಾಲಾ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ, ಡಿಎಚ್‌ಒ ಭೇಟಿ : ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿಎಚ್ಒ ಟಿ.ಲಿಂಗರಾಜ ಅವರು ಸಂಗಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ADVERTISEMENT

ನಂತರ ಉಪವಿಭಾಗಾಧಿಕಾರಿ ಮಾತನಾಡಿ, ವಿದ್ಯಾರ್ಥಿಗಳು ಸೇವಿಸಿದ ಚಿತ್ರಾನ್ನ, ಕುಡಿಯುವ ನೀರು ಮಾದರಿ ಸಂಗ್ರಹಿಸಿ ಎಫ್ಎಸ್ಎಲ್‌ಗೆ ಕಳುಹಿಸಿ, ವರದಿ ಪಡೆದು, ಘಟನೆಗೆ ಕಾರಣ ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುವುದು. 6 ವಿದ್ಯಾರ್ಥಿಗಳಿಗೆ ಗ್ಲೂಕೋಸ್ ಹಚ್ಚಿದ್ದು, ಅವರು ಚೇತರಿಕೆ ಕಾಣುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳು ಗುಣಮುಖರಾಗಿದ್ದು, ಭಯಪಡುವ ಅವಶ್ಯಕತೆ ಇಲ್ಲ. ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡರೆ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂಜಾಗೃತ ಕ್ರಮವಾಗಿ ಆಂಬುಲೆನ್ಸ್ ಸಿದ್ಧವಾಗಿ ಇಡಲಾಗಿತ್ತು. ಆದರೆ ಮಕ್ಕಳು ಚೇತರಿಕೆ ಕಂಡ ಕಾರಣ ಸ್ಥಳಾಂತರಿಸುವ ಅಗತ್ಯವಿಲ್ಲ ಎಂದರು.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಯು.ನಾಗರಾಜ, ತಾ.ಪಂ ಇಒ ಲಕ್ಷ್ಮೀದೇವಿ, ಬಿಇಒ ವೆಂಕಟೇಶ ಸೇರಿ ಸ್ಥಳೀಯ ಆಡಳಿತಗಳ ಅಧಿಕಾರಿಗಳು ಭೇಟಿ ನೀಡಿದ್ದರು.

ಗಂಗಾವತಿ ತಾಲ್ಲೂಕಿನ ಸಂಗಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸಗೊಂಡ ವಿದ್ಯಾರ್ಥಿಗಳಿಗೆ ಸಂಗಾಪುರದ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು
ಗಂಗಾವತಿ ತಾಲ್ಲೂಕಿನ ಸಂಗಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸಗೊಂಡ ವಿದ್ಯಾರ್ಥಿಗಳಿಗೆ ಸಂಗಾಪುರದ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.