ಗಂಗಾವತಿ: ಹನುಮನನಾಡು ಎನ್ನುವ ಕಾರಣಕ್ಕೆ ಜಗತ್ತಿನ ಗಮನ ಸೆಳೆದ ಗಂಗಾವತಿಗೆ ಬರುವವರ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮದ ಪ್ರಮುಖ ಸ್ಥಳಗಳೂ ಈ ತಾಲ್ಲೂಕಿನಲ್ಲಿದ್ದು, ನೆರೆಯಲ್ಲಿ ವಿಶ್ವವಿಖ್ಯಾತ ಹಂಪಿಯಿದೆ. ಇಷ್ಟೆಲ್ಲಾ ಮಹತ್ವ ಹೊಂದಿರುವ ಗಂಗಾವತಿ ನೋಡಲು ಬರುವ ಪ್ರವಾಸಿಗರಿಗೆ ಹಾಗೂ ನಿತ್ಯ ಸಂಕಷ್ಟ ಅನುಭವಿಸುವ ಸಾರ್ವಜನಿಕರಿಗೆ ಹದಗೆಟ್ಟ ರಸ್ತೆಗಳೇ ಕಂಟಕವಾಗುತ್ತಿವೆ.
ತಾಲ್ಲೂಕಿನ ಒಳ ಮತ್ತು ಗ್ರಾಮೀಣ ಭಾಗದ ರಸ್ತೆಗಳಲ್ಲಿ ಬಾಯ್ತೆರದ ಬೃಹತ್ ಗುಂಡಿಗಳು ಹಲವು ಜೀವಗಳನ್ನು ಬಲಿ ಪಡೆದಿದ್ದರೂ, ರಸ್ತೆ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಚುನಾವಣೆಯ ಪೂರ್ವದಲ್ಲಿ ಗಂಗಾವತಿಯನ್ನು ವಿದೇಶಗಳ ರೀತಿ ಅಭಿವೃದ್ಧಿಪಡಿಸುತ್ತೇನೆ ಎನ್ನುವ ಭರವಸೆ ನೀಡಿದ ರಾಜಕೀಯ ನಾಯಕರು ಹದಗೆಟ್ಟ ರಸ್ತೆಗಳ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಅಧಿಕಾರಿಗಳು ಕೂಡ ನಿಷ್ಕ್ರೀಯರಾಗಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆಗಳು ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿವೆ. ಸರ್ಕಾರಗಳು, ಜನಪ್ರತಿನಿಧಿಗಳು ಎಲ್ಲವೂ ಬದಲಾಗಿವೆ. ಆದರೆ ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸಿಲ್ಲ. ಡಾಂಬಾರು ಕಿತ್ತಿ ಗುಂಡಿಗಳು ಬಿದ್ದಾಗ ಕೆಂಪುಮಣ್ಣು, ಜಲ್ಲಿ ಕಲ್ಲು ಹಾಕಿಸಿ, ತಾತ್ಕಾಲಿಕವಾಗಿ ದುರಸ್ತಿ ಮಾಡಿಸಲಾಗುತ್ತಿದೆ ಹೊರತು ಶಾಶ್ವತ ಪರಿಹಾರ ಕಲ್ಪಿಸುವ ಕ್ರಮವಾಗಿಲ್ಲ.
ಕೆಟ್ಟ ರಸ್ತೆಗಳಿಂದಾಗಿ ವಾಹನಗಳ ಟೈಯರ್ ಒಡೆಯುವುದು, ಕೆಳಭಾಗದ ಪ್ಲೇಟ್ ತುಂಡಾಗುವುದು, ಪಂಚರ್ ಆಗುವುದು ಸೇರಿ ಹಲವು ಸಮಸ್ಯೆಗಳು ಎದುರಾಗುತ್ತಲೇ ಇವೆ. ಗಂಗಾವತಿ ಮಾರುಕಟ್ಟೆಗೆ ಸಾಕಷ್ಟು ಬೇಡಿಕೆಯಿದ್ದು, ರಾಜ್ಯದ ಭತ್ತದ ಕಣಜವಾಗಿದೆ. ಹೀಗಾಗಿ ಹೊರರಾಜ್ಯಗಳಿಂದಲೂ ವ್ಯಾಪಾರಿಗಳು ಬರುವುದು ಸಾಮಾನ್ಯ.
ಗಾಂಧಿ ವೃತ್ತ, ಬಸವಣ್ಣ ವೃತ್ತ, ಜುಲೈ ನಗರ, ಶಿವೆಟಾಕೀಸ್, ಬಿಲಾಲ್ ಮಸೀದಿ ರಸ್ತೆ, ಬಸ್ ನಿಲ್ದಾಣ, ವಿರೂಪಾಪುರ ತಾಂಡಾ, ಲಲಿತಮಹಲ್ ಹೊಟೇಲ್ ಸೇರಿ ಮುಂಭಾಗ ಸೇರಿ ಅನೇಕ ಕಡೆದ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಸಿದ್ದಿಕೇರಿ, ಗೌಳಿ ಮಹಾದೇವಪ್ಪ, ಗುಂಡಮ್ಮ ಕ್ಯಾಂಪ್, ಎಚ್.ಬಿ.ಎಂ, ಮಾರುಕಟ್ಟೆ, ವಾಲ್ಮೀಕಿ, ಜೈನ್ ಕಾಲೊನಿ ರಸ್ತೆಗಳಲ್ಲಿ ಗುಂಡಿಗಳೇ ‘ರಸ್ತೆ ರಾಜ’ರಂತಿವೆ.
ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ: ಗಂಗಾವತಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಪುನರ್ಜನ್ಮ ನೀಡಿದೆ, ಕ್ಷೇತ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತರುತ್ತೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಜನರಿಗೆ ನೀಡಿದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಸರಿಯಾಗಿ ಜನರ ಕೈಗೆ ಸಿಗುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಲ್ಲಿ ವ್ಯಾಪಕವಾಗಿದೆ.
ಪಕ್ಷದ ಕೆಲಸ, ಚುನಾವಣೆ, ಪಕ್ಷದ ನಾಯಕರ ಭೇಟಿ, ಕೇಸುಗಳ ಇತ್ಯರ್ಥ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿರುವುದಕ್ಕಿಂತ ಹೊರಗಡೆ ಇರುವುದೇ ಹೆಚ್ಚು. 15ರಿಂದ 20 ದಿನಗಳಿಗೊಮ್ಮೆ ಕ್ಷೇತ್ರಕ್ಕೆ ಭೇಟಿ ನೀಡುವ ಶಾಸಕರಿಗೆ ಕ್ಷೇತ್ರದ ರಸ್ತೆಗಳ ದುರಸ್ತಿ, ಚರಂಡಿ, ನಿವೇಶನ, ಹಕ್ಕುಪತ್ರ, ಅಧಿಕಾರಿಗಳ ಅಪ್ರಮಾಣಿಕ ಕೆಲಸಗಳು ಯಾವುದೂ ಕಣ್ಣಿಗೆ ಕಾಣುತ್ತಿಲ್ಲ. ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಶಾಸಕರೇ ಸಿಗದಿದ್ದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.
ಅಂಜನಾದ್ರಿ ರಸ್ತೆ ಸಂಚಾರವೇ ಕಷ್ಟ
ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿಗೆ ರಾಜ್ಯ ಹೊರರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಾರೆ. ನೆರೆ ಜಿಲ್ಲೆಗಳ ಭಕ್ತರು ವಾಹನಗಳಲ್ಲಿ ಬರುವುದು ಸಾಮಾನ್ಯವಾಗಿದ್ದು ಅವರಿಗೂ ಸಂಚಾರ ಸಂಕಟದ ಬಿಸಿ ತಪ್ಪದೇ ಇರದು. ಅಂಜನಾದ್ರಿ ಸಮೀಪದ ಹನುಮನಹಳ್ಳಿ ಚಿಕ್ಕರಾಂಪುರ ಆನೆಗುಂದಿ ಕಡೆಬಾಗಿಲು ಬಸವನದುರ್ಗ ಬಂಡಿ ಬಸಪ್ಪ ಕ್ಯಾಂಪ್ ಸಂಗಾಪುರ ಸಾಯಿನಗರ ಹಿರೇಜಂತಕಲ್‌ವರೆಗೆ ರಸ್ತೆಗಳಲ್ಲಿ ಗುಂಡಿಗಳು ಸಾಕಷ್ಟಿವೆ. 2017ರಲ್ಲಿ ಗಂಗಾವತಿ-ಆನೆಗೊಂದಿ ರಸ್ತೆ ಕೊನೆಯದಾಗಿ ರಸ್ತೆ ಸರಿಪಡಿಸುವುದು ಬಿಟ್ಟರೆ ಆಗಾಗ ತೇಪೆ ಮಾತ್ರ ಹಾಕಲಾಗಿದೆ.
ಈಚೆಗೆ ಕೆಕೆಆರ್‌ಡಿಬಿ ಅನುದಾನದಡಿ ಸಾಯಿನಗರದಿಂದ ಕಡೆಬಾಗಿಲು ಕ್ರಾಸ್ ತನಕ ₹22 ಕೋಟಿ ವೆಚ್ಚದ ರಸ್ತೆ ನವೀಕರಣ ಕಾಮಗಾರಿ ಚಾಲನೆ ಲಭಿಸಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಮರಕುಂಬಿ ಭಟ್ಟರನರಸಾಪುರ ಭಂಡಾರಳ ಉಡಮಕಲ್ ವಿಠಲಾಪುರ ಆಗೋಲಿ ವೆಂಕಟಗಿರಿ ಅಯೋಧ್ಯಾ ಚಿಕ್ಕಜಂತಕಲ್ ಢಣಾಪುರ ಗ್ರಾಮಗಳಿಗೆ ತೆರಳುವಾಗಲೂ ಇದೇ ಸಮಸ್ಯೆ ಕಾಡುತ್ತದೆ.
ಗಂಗಾವತಿಯ ಪ್ರಮುಖ ವೃತ್ತಗಳಲ್ಲಿನ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ಡಾಂಬರು ಕಿತ್ತಿ ಹೋಗಿ ಜಲ್ಲಿಕಲ್ಲುಗಳು ಎದ್ದಿವೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಯಾರೂ ಆಸಕ್ತಿ ತೋರುತ್ತಿಲ್ಲ.ಹರನಾಯಕ ವಡ್ಡರಹಟ್ಟಿ, ನಿವಾಸಿ
ವಿಠಲಾಪುರ-ದಾಸನಾಳ ಗ್ರಾಮದ ಮಾರ್ಗದ ಗಡ್ಡಿ ಬಂಡ್ರಾಳ ವೆಂಕಟಗಿರಿ ಗ್ರಾಮದ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿವೆ. ಬೃಹತ್ ಗುಂಡಿಗಳು ಬಿದ್ದಿವೆ.ಯಂಕೋಬ ಹಿರೇಮನಿ, ವಿಠಲಾಪುರ ಗ್ರಾಮದ ನಿವಾಸಿ
ಆನೆಗೊಂದಿ-ಸಂಗಾಪುರ ಮಾರ್ಗದ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚಾರಕ್ಕೆ ನಲುಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಮುಂದಿನ ತಿಂಗಳು ಹನುಮಮಾಲಾ ವಿಸರ್ಜನೆ ನಡೆಯಲಿದ್ದು ಈಗಲಾದರೂ ದುರಸ್ತಿಪಡಿಸಲಿ.ವೆಂಕಟೇಶ ಸೂರ್ಯನಾಯಕ, ತಾಂಡ ನಿವಾಸಿ
ಗಂಗಾವತಿ ನಗರದಲ್ಲಿ ಈಗಾಗಲೇ ಶೇ 40ರಷ್ಟು ರಸ್ತೆಯ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇನ್ನುಳಿದ ಶೇ 60ರಷ್ಟು ಗುಂಡಿಗಳನ್ನು ವೇಗವಾಗಿ ಮುಚ್ಚಿಸಲಾಗುತ್ತದೆಆರ್.ವಿರೂಪಾಕ್ಷಮೂರ್ತಿ, ಪೌರಾಯುಕ್ತರು, ನಗರಸಭೆ ಗಂಗಾವತಿ
ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಈಗಾಗಲೇ ಸಾಯಿನಗರದಿಂದ ಕಡೆಬಾಗಿಲು ಕ್ರಾಸ್ ತನಕ ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸಿದ್ದು ಕೆಲವಡೆ ಮೀಸಲು ಅರಣ್ಯ ಪ್ರದೇಶ ಬರುತ್ತಿರುವುದರಿಂದ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗಿದೆ.ವಿಶ್ವನಾಥ, ಎಇಇ, ಲೋಕೋಪಯೋಗಿ ಇಲಾಖೆ ಗಂಗಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.