ಕಾರಟಗಿ: ಮಕ್ಕಳ ಸಾಹಿತ್ಯ ಅವರ ಮನೋಭಾವ, ವಯಸ್ಸಿಗೆ ಸರಿ ಹೊಂದುವಂತಿರಬೇಕು. ಸಾಂಸ್ಕೃತಿಕ, ಪ್ರಸ್ತುತವಾದ ವಿಚಾರಗಳನ್ನು ಹೊಂದಿದರೆ ಮಾತ್ರ ಮಕ್ಕಳಿಗೆ ಅರ್ಥವಾಗುವ ಸಾಹಿತ್ಯ ರಚಿಸಬಹುದು. ಯುವ ಬರಹಗಾರ ಸೋಮು ಕುದುರಿಹಾಳ ಇದನ್ನು ಅಳವಡಿಸಿಕೊಂಡು ಮಕ್ಕಳ ಕಥೆಗಳ ವಿಶಿಷ್ಟ ಬರಹಗಾರರಾಗಿ ಹೊರಹೊಮ್ಮಿದ್ದಾರೆ ಎಂದು ಉಪನ್ಯಾಸಕ ಬಸವರಾಜ ಬಳಿಗಾರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕವು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಯುವ ಬರಹಗಾರ ಸೋಮು ಕುದುರಿಹಾಳರ ‘ಚಮತ್ಕಾರಿ ಚಾಕೊಲೇಟ್ʼ ಮಕ್ಕಳ ಕಥಾ ಸಂಕಲನದ ಪುಸ್ತಕಾವಲೋಕನ ಕುರಿತು ಮಾತನಾಡಿದರು.
ಸೋಮು ಕುದುರಿಹಾಳ ಅವರ ಕೃತಿಯು ಭಾಷಾ ಪ್ರಯೋಗ, ದೇಶಿ ನುಡಿಗಟ್ಟಿನ ಬಳಕೆಯಿಂದ ಹೆಚ್ಚು ಓದಿಸಿಕೊಂಡು ಹೋಗುವುದಲ್ಲದೇ, ಹೆಚ್ಚು ಆಪ್ತವಾಗುತ್ತದೆ. ಮಕ್ಕಳ ಕಥಾ ಸಂಕಲನ ಕೃತಿಯಲ್ಲಿ ಬರುವ ಕತೆಗಳು ವಿಶಿಷ್ಟವಾಗಿವೆ. ಇಲ್ಲಿನ ಬಹುತೇಕ ಕತೆಗಳು ಮಕ್ಕಳ ಮನೋಭೂಮಿಕೆಯ ಶೋಧವನ್ನೇ ಕೇಂದ್ರವಾಗಿ ಹೊಂದಿವೆ. ಮಕ್ಕಳಿಗೆ ಸುಲಭವಾಗಿ ನಿಲುಕಬಹುದಾದ ಸಂಗತಿಗಳನ್ನೇ ಹೆಣೆಯಲಾಗಿದೆ. ಕಥಾ ಸಂಕಲನ ಮಕ್ಕಳಲ್ಲಿ ಸ್ಪೂರ್ತಿ, ಮನರಂಜನೆ, ಬೌದ್ಧಿಕ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿದೆ ಎಂದರು.
ಒಟ್ಟು 18 ಕತೆಗಳಲ್ಲಿ ಪೃಕೃತಿ, ಬರಗಾಲ, ವಾಸ್ತವಿಕ ಸಂಗತಿಗಳು ದಟ್ಟವಾಗಿವೆ. ಕಸಾಪ ಕಾರ್ತಿಕೋತ್ಸವ ಹೆಸರಿನಲ್ಲಿ ಸಾಹಿತ್ಯದ ಕಂಪನ್ನು ಪಸರಿಸಲು ಮುಂದಾಗಿರುವುದು ಶ್ಲಾಘನಾರ್ಹ. ಇಂತಹ ಕಾರ್ಯಕ್ರಮಗಳಿಂದ ಜ್ಞಾನದ ಬೆಳಕನ್ನು ಹಚ್ಚಿ, ಶಾಂತಿ, ಸೌಹಾರ್ದತೆ ಎನ್ನುವ ಬೆಳಕನ್ನು ಪಸರಿಸಿದಂತಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಕರ್ನಾಟಕ ರಾಜ್ಯ ನಾಮಕರಣವಾಗಿ ಸುವರ್ಣ ಸಂಭ್ರಮ ಆಚರಿಸುತ್ತಿರುವ ಸಮಯದಲ್ಲೇ ಪೂರಕವೆಂಬಂತೆ ಕನ್ನಡ ಕಾರ್ತಿಕೋತ್ಸವ ನಡೆಯುತ್ತಿರುವುದು ಶ್ಲಾಘನಾರ್ಹ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಅನೀಲ್‌ಕುಮಾರ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಮೇಶ ಕುಲ್ಕರ್ಣಿ ಮರಳಿ ಮಾತನಾಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ನಿರ್ದೇಶಕ ಮಲ್ಲಿಕಾರ್ಜುನ ಯತ್ನಟ್ಟಿ, ನಿವೃತ್ತ ಉಪನ್ಯಾಸಕ ಮಹಿಬೂಬ ಹುಸೇನ್, ಉಪನ್ಯಾಸಕರಾದ ಮಹಾಬಳೇಶ್ವರ ವಿಶ್ವಕರ್ಮ, ಪೆದ್ದ ಸುಬ್ಬಣ್ಣ, ಕೆಆರ್‌ಸಿ ವರ್ಮಾ, ನಾಗರಾಜ್, ವಿಷ್ಣು ನಾಯಕ, ಲಕ್ಷ್ಮೀಕಾಂತ, ಮಲ್ಲಪ್ಪ, ಚಂದ್ರಶೇಖರಮ್ಮ, ಮಲ್ಲಮ್ಮ, ಸಂಗಮೇಶ ಉಪಸ್ಥಿತರಿದ್ದರು.
ಕಸಾಪ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಮಾಜಿ ಅಧ್ಯಕ್ಷ ಬಸವರಾಜ ರ‍್ಯಾವಳದ, ಆಡಳಿತ ಮಂಡಳಿ ಸದಸ್ಯ ರುದ್ರಗೌಡ ಪಾಟೀಲ್ ಮೈಲಾಪುರ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.