ಅಳವಂಡಿ: ಇಲ್ಲಿಗೆ ಸಮೀಪದ ಹಂದ್ರಾಳ ಗ್ರಾಮದ ಕೃಷಿಕ ಪ್ರಭುಗೌಡ ಪೊಲೀಸ್‌ಪಾಟೀಲ ಅವರು ತಮ್ಮ 25 ಗುಂಟೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಅಲ್ಪ ಜಮೀನಿನಲ್ಲಿ ಸಾವಯುವ ಕೃಷಿ ಪದ್ಧತಿ, ಹನಿ ನೀರಾವರಿ ಅಳವಡಿಸಿಕೊಂಡ ಪ್ರಭುಗೌಡ ಪಾಟೀಲ ಇತರ ರೈತರಿಗೆ ಮಾದರಿಯಾಗಿದ್ದಾರೆ. ಬೇಸಿಗೆಯಲ್ಲಿ ಭೂಮಿ ನೇಗಿಲು ಹೊಡೆದು, ಹದಗೊಳಿಸಿದ್ದರು. ಬಳಿಕ ತಿಪ್ಪೆ ಗೊಬ್ಬರ ಹಾಕಿ ಮತ್ತೆ ಭೂಮಿ ಹದ ಮಾಡಿ ಮೆಣಸಿನಕಾಯಿ ಬೀಜವನ್ನು ನಾಟಿ ಮಾಡಿದ್ದಾರೆ.
‘25 ಗುಂಟೆ ಜಮೀನಿನಲ್ಲಿ ಮುಕ್ಕಾಲು ಕೆಜಿ ಮೆಣಸಿನಕಾಯಿ ಬೀಜವನ್ನು ಸಾಲಿನಿಂದ ಸಾಲಿಗೆ 3.5 ಅಡಿ, ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರದಲ್ಲಿ ಬೀಜ ನಾಟಿ ಮಾಡಲಾಗಿದೆ. ಮೊದಲ ಬಾರಿ 4 ಕ್ವಿಂಟಲ್, ಎರಡನೇಯ ಬಾರಿ 10 ಕ್ವಿಂಟಲ್ ಇಳುವರಿ ಬಂದಿದೆ. ಪ್ರತಿ ಕ್ವಿಂಟಲ್‌ಗೆ ₹8 ಸಾವಿರದಂತೆ ಮಾರಾಟ ಮಾಡಲಾಗಿದ್ದು, ಮೂರನೇ ಬಾರಿ 15 ಕ್ವಿಂಟಲ್ ಬೆಳೆ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ರೈತರ ಪ್ರಭುಗೌಡ.
‘ಒಮ್ಮೆ ನಾಟಿ ಮಾಡಿದರೇ 6 ರಿಂದ 7 ಬಾರಿ ಕಟಾವು ಮಾಡಬಹುದು. ಕಾಯಿ ಪ್ರಾರಂಭಿಕ ಹಂತದಿಂದಲೂ 15 ರಿಂದ 20 ದಿನಕ್ಕೊಮ್ಮೆ ಕಟಾವು ಮಾಡಲಾಗುತ್ತದೆ. ಒಂದು ಗಿಡದಲ್ಲಿ ಸುಮಾರು 3 ರಿಂದ 4 ಕೆಜಿ ಮೆಣಸಿನಕಾಯಿ ದೊರೆಯುತ್ತದೆ. ಸರ್ಕಾರಿ ಗೊಬ್ಬರವನ್ನು ಅಲ್ಪ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹೆಚ್ಚಾಗಿ ಸಗಣಿ ಗೊಬ್ಬರವನ್ನು ಬಳಸಿದ್ದೇನೆ ಎನ್ನುತ್ತಾರೆ ಅವರು.
ಹೆಚ್ಚಾಗಿ ಗದಗ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿವರೆಗೂ ಖರ್ಚು ತೆಗೆದು, ಸುಮಾರು ಒಂದೂವರೆ ಲಕ್ಷ ಲಾಭ ದೊರೆತಿದೆ. ಈ ಬೆಳೆಯು ಗದಗ ಮಾರುಕಟ್ಟೆಯಲ್ಲಿ ‘ಹಂದ್ರಾಳ ಮೆಣಸಿನಕಾಯಿ’ ಎಂಬ ಹೆಸರಿನ ಮೂಲಕ ವಿಶೇಷತೆಯನ್ನು ಪಡೆದಿದೆ.
ಮಾಹಿತಿಗೆ ಪ್ರಭುಗೌಡ ಪೊಲೀಸ್‌ಪಾಟೀಲ (78292 28512) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.