ಕೊಪ್ಪಳ: ಸರ್ಕಾರಿ ನೌಕರಿ ನೇಮಕಾತಿ ಆದೇಶ ಪತ್ರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ರಾಜ್ಯದ ವಿವಿಧ ಕಡೆಯಿಂದ ನೌಕರಿಗೆ ಆಯ್ಕೆಯಾದವರು ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಜಿಲ್ಲೆಯಲ್ಲಿ 54 ಜನ ಆದೇಶ ಪ್ರತಿಗೆ ಕಾಯುತ್ತಿದ್ದು, ಅದರಲ್ಲಿ 20ಕ್ಕೂ ಹೆಚ್ಚು ಜನ ಈಗಾಗಲೇ ದಯಾಮರಣ ಕೋರಿದ್ದಾರೆ.
ನೌಕರಿ ಆಕಾಂಕ್ಷಿಗಳ ಎಲ್ಲರ ಪತ್ರದ ಸಾರಾಂಶ ಒಂದೇ ಆಗಿದ್ದು ‘2021ರ ಸೆಪ್ಟೆಂಬರ್ 30ರಂದು ಆರಂಭವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ನೇಮಕಾತಿ ಆದೇಶ ಪ್ರತಿ ಮತ್ತು ಸ್ಥಳ ನಿಯುಕ್ತಿ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿರುವುದರಿಂದ ರೋಸಿ ಹೋಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಪ್ರತಿಕ್ಷಣವೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ಯಾವುದೇ ಉದ್ಯೋಗವಿಲ್ಲದ ಕಾರಣ ನಾನು ಹಾಗೂ ನನ್ನ ಕುಟುಂಬ ಜೀವನ ನಡೆಸುವುದು ದುಸ್ತರವಾಗುತ್ತಿದೆ’ ಎಂದು ಪತ್ರದಲ್ಲಿ ಬೇಸರ ತೋಡಿಕೊಂಡಿದ್ದಾರೆ.
‘ಎಲ್ಲ ಪದವಿಗಳನ್ನು ಹೊಂದಿದ್ದರೂ ನಿರುದ್ಯೋಗಿಯಾಗಿದ್ದು ಒಂದು ಕಡೆ ಆದೇಶ ಪ್ರತಿ ಸಿಗದಿರುವುದು ಮತ್ತಷ್ಟು ಅತಂತ್ರಗೊಳಿಸಿದೆ. ಆತ್ಮಹತ್ಯೆ ಮಾಡಿಕೊಂಡು ಸಂಬಂಧಿಕರಿಗೆ, ಮನೆಯವರಿಗೆ ಹಾಗೂ ನಂಬಿಕೊಂಡವರಿಗೆ ಅವಮಾನ ಮಾಡುವ ಬದಲು ನನಗೆ ದಯಾಮರಣಕ್ಕೆ ಅನುಮತಿ ಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
‘ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಪಡೆದು ಅರ್ಹನಾದರೂ ಸರ್ಕಾರದ ವಿಳಂಬ ಧೋರಣೆಯಿಂದಾಗಿ ಬೇಸತ್ತು ಹೋಗಿದ್ದೇವೆ. ನಿತ್ಯ ಕೊರಗಿ ಉಸಿರುಬಿಡುವುದಕ್ಕಿಂತಲೂ ಮೊದಲು ದಯಾಮರಣ ಕರುಣಿಸಬೇಕು’ ಎಂದು ಎಲ್ಲರೂ ಪತ್ರ ಬರೆದಿದ್ದೇವೆ ಎಂದು ಉದ್ಯೋಗಾಕಾಂಕ್ಷಿಯಾಗಿರುವ ನಗರದ ಅರ್ಥಶಾಸ್ತ್ರ ಪದವೀಧರ ಕಳಕನಗೌಡ ಪಾಟೀಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.