ADVERTISEMENT

ಕೊಪ್ಪಳ: ದೇಗುಲದ ಕಟ್ಟೆ ಮೇಲೆ ಮಕ್ಕಳಿಗೆ ಪಾಠ

ಶಿವಕುಮಾರ್ ಕೆ
Published 16 ಜುಲೈ 2020, 19:30 IST
Last Updated 16 ಜುಲೈ 2020, 19:30 IST
ಗಂಗಾವತಿ ತಾಲ್ಲೂಕಿನ ಲಕ್ಷ್ಮೀಕ್ಯಾಂಪ್ ಕುಂಟೋಜಿ ಗ್ರಾಮದ ದೇವರ ಕಟ್ಟೆ ಮೇಲೆ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕ ಸೋಮು ಕುದರಿಹಾಳ
ಗಂಗಾವತಿ ತಾಲ್ಲೂಕಿನ ಲಕ್ಷ್ಮೀಕ್ಯಾಂಪ್ ಕುಂಟೋಜಿ ಗ್ರಾಮದ ದೇವರ ಕಟ್ಟೆ ಮೇಲೆ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕ ಸೋಮು ಕುದರಿಹಾಳ   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಲಕ್ಷ್ಮಿ ಕ್ಯಾಂಪ್‌ನ ಕುಂಟೋಜಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೋಮು ಕುದರಿಹಾಳ ಅವರು, ನಿತ್ಯ ಕ್ಯಾಂಪ್‌ನಲ್ಲಿರುವ ದೇಗುಲದ ಕಟ್ಟೆಯ ಮೇಲೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸಂದರ್ಭದಲ್ಲಿ ಮಕ್ಕಳ ಕಲಿಕೆ ನಿರಂತರವಾಗಿರಬೇಕು ಎಂಬ ಉದ್ದೇಶದಿಂದ ಅವರು ಇರುವಲ್ಲಿಯೇ ಹೋಗಿ ಪಾಠ ಮಾಡುತ್ತಿದ್ದಾರೆ. ಇದು ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ.

ಗ್ರಾಮದ ಮಧ್ಯದಲ್ಲಿರುವ ದೇವರ ಕಟ್ಟೆಯ ಮೇಲೆ ಆರಂಭಿಕ ಕಲಿಕಾ ಸನ್ನಿವೇಶವನ್ನು ರಚಿಸಿ ವರ್ಣಮಾಲೆ, ಗುಣಿತಾಕ್ಷರ, ಒತ್ತಕ್ಷರ ಪರಿಚಯ ಹಾಗೂ ಸರಳ ಪದಗಳ ಕಲಿಕೆ ಮತ್ತು ಗಣಿತದ ಮೂಲಕ್ರಿಯೆಗಳನ್ನು ಮಕ್ಕಳಿಗೆ ಹೇಳಿಕೊಡುತ್ತಾರೆ.

ADVERTISEMENT

ಮಕ್ಕಳಿಗೆ ಇಂಗ್ಲಿಷ್ ಕಲಿಕೆಯನ್ನು ಕೂಡ ಅಭ್ಯಾಸ ಮಾಡಿಸಲಾಗುತ್ತಿದ್ದು, ಈ ಮೂಲಕ ಮಕ್ಕಳಿಗೆ ಕಲಿತ ವಿಷಯಗಳು ಪುನರ್ ಮನನವಾಗುವುದರ ಜೊತೆಗೆ ಕಲಿಕಾಂಶಗಳು ಮರೆತು ಹೋಗಬಾರದು ಎಂಬುದು ಅವರ ಉದ್ದೇಶವಾಗಿದೆ.

ಶಾಲೆಯಲ್ಲಿ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 20 ವಿದ್ಯಾರ್ಥಿಗಳು ಅದೇ ಗ್ರಾಮದವರಾಗಿದ್ದರಿಂದ ಶಿಕ್ಷಕರಿಗೆ ನಿತ್ಯ ಪಾಠ ಮಾಡಲು ಅನುಕೂಲವಾಗಿದೆ. ಇದೇ ವೇಳೆ ಮಕ್ಕಳಿಗೆ ಕೋವಿಡ್‌ ಸೋಂಕು ಹರಡದಂತೆ ಸಾಕಷ್ಟು ನಿಗಾ ವಹಿಸಿದ್ದಾರೆ. ಎಲ್ಲ ಮಕ್ಕಳು ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಕೂರುತ್ತಾರೆ.

ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ: ಶಿಕ್ಷಕ ಸೋಮು ಕುದರಿಹಾಳ ಅವರು, ಮಕ್ಕಳ ಪೋಷಕರ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಆ ಮೂಲಕ ಪೋಷಕರು ಮನೆಯಲ್ಲಿ ಮಕ್ಕಳಿಗೆ ಯಾವ ರೀತಿ ಅಭ್ಯಾಸ ಮಾಡಿಸಬೇಕು ಎಂಬುದರ ವರ್ಕ್‌ ಶೀಟ್‌ಗಳನ್ನೂ ನಿತ್ಯ ಕಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.