ADVERTISEMENT

ಕೊಪ್ಪಳ | ಏತ ನೀರಾವರಿ ಅನುಷ್ಠಾನಕ್ಕೆ ಒತ್ತಾಯಿಸಿ ಶಾಸಕರ ಕಚೇರಿವರೆಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 14:53 IST
Last Updated 12 ಆಗಸ್ಟ್ 2023, 14:53 IST

ಕುಷ್ಟಗಿ: ಕೃಷ್ಣಾ ಬಿ ಯೋಜನೆಯಲ್ಲಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕಚೇರಿವರೆಗೂ ಪಾದಯಾತ್ರೆ ನಡೆಸಲಾಗುತ್ತದೆ ಎಂದು ನೀರಾವರಿ ಹೋರಾಟ ಸಮಿತಿ ಪ್ರಮುಖರಾದ ಗಂಗಾಧರ ಕುಷ್ಟಗಿ ಹೇಳಿದ್ದಾರೆ.

ಈ ಕುರಿತು ಶನಿವಾರ ಇಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು. ‘ಈ ನೀರಾವರಿ ಯೋಜನೆ ಈ ಭಾಗದ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದ್ದರೂ ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಮತ್ತು ಈ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಪಕ್ಷಪಾತ ಧೋರಣೆಯಿಂದ ಮರೀಚಿಕೆಯಾಗಿ ಪರಿಣಮಿಸಿದೆ’ ಎಂದು ಆರೋಪಿಸಿದರು.

ಸೆಪ್ಟೆಂಬರ್‌ ತಿಂಗಳಲ್ಲಿ ಕಲಾಲಬಂಡಿಯಿಂದ ಸಚಿವರ ಮನೆ ಅಥವಾ ಕಚೇರಿವರೆಗೆ ಪಾದಯಾತ್ರೆಯ ಮೂಲಕ ತೆರಳಿ ಮುತ್ತಿಗೆಹಾಕಿ ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಬಿಸಿ ತಲುಪಿಸಬೇಕಿದೆ. ಹಾಗಾಗಿ ಪಕ್ಷಾತೀತವಾಗಿ ನಡೆಯಲಿರುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯ ನೀರಾವರಿ ಹೋರಾಟಗಾರರು, ಸಾರ್ವಜನಿಕರು, ಪ್ರಜ್ಞಾವಂತರು, ಮಠಾಧೀಶರು, ಸಂಘ ಸಂಸ್ಥೆಗಳು ಹಾಗೂ ರೈತರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡುವುದಾಗಿ ತಿಳಿಸಿದರು.

ADVERTISEMENT

‘ಪ್ರಸಕ್ತ ವರ್ಷದ ಬಜೆಟ್‌ದಲ್ಲಿ ಕೊಪ್ಪಳ ಏತ ನೀರಾವರಿಗೆ ಹಣ ನಿಗದಿಪಡಿಸದಿರುವುದು ಬೇಸರದ ಸಂಗತಿಯಾಗಿದೆ’ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನಲಾಲ ಜೈನ್, ಶರಣಪ್ಪ ಜಡಿ, ನಬಿಸಾಬ ಕುಷ್ಟಗಿ, ಗುಲಾಂ ಹುಸೇನ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.