ಕೊಪ್ಪಳ: ಕಲ್ಯಾಣ ಕರ್ನಾಟಕದ ವಚನ ಸಾಹಿತ್ಯ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಸಾಹಿತ್ಯದ ತಿರುಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಎ.ಎಸ್.ಐ ಶಾಂತಪ್ಪ ಬೆಲ್ಲದ್ ಹೇಳಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಅಖಿಲ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ತಾಲ್ಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನಡೆದ ವಚನ ವಾಚನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಿಲ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಸಾವಿತ್ರಿ ಮುಜುಮದಾರ ‘ಅಂಬಿಗರ ಚೌಡಯ್ಯನವರು ಸಂಪ್ರದಾಯ ಜಿಡ್ಡುಗಟ್ಟಿದ ಸಮಾಜಕ್ಕೆ ಶರಣ ಸಂಸ್ಕೃತಿಯ ಶಕ್ತಿ ದೊರಕಿಸಿಕೊಟ್ಟವರು. ತಮ್ಮ ದಿಟ್ಟ ಮಾತುಗಳಿಂದ ನಾಡಿಗೆ ಶಕ್ತಿ ಹಾಗೂ ಯುಕ್ತಿ ಕರುಣಿಸಿದರು‘ ಎಂದರು.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿ ‘ಬಸವಣ್ಣನವರು 12ನೇ ಶತಮಾನದಲ್ಲಿ ಪ್ರಥಮ ಅನುಭವ ಮಂಟಪ ಸ್ಥಾಪಿಸಿದರು. ಅವರ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ವಿಶ್ವಮಾನತ್ವದ ಕಡೆಗೆ ಸಾಗಬೇಕಾಗಿದೆ‘ ಎಂದರು.
ಕಾಲೇಜಿನ ಪ್ರಾಚಾರ್ಯ ಮಾರುತೇಶ್ ಬಿ., ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ, ಉಪನ್ಯಾಸಕಿ ಡಾ.ಭಾಗ್ಯಜ್ಯೋತಿ, ಗಾಯತ್ರಿ ಬಾವಿಕಟ್ಟಿ, ಸುಮಂಗಲಾ ಹಂಚಿನಾಳ, ಮಮತಾ, ಸವಿತಾ ಸವಡಿ, ಡಾ.ಪ್ರಕಾಶ ಬಳ್ಳಾರಿ, ಸುಮಿತ್ರಾ ವಿಪ್ಲವಿ, ಲಕ್ಷ್ಮೀಬಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶಬಾಬು ಸುರ್ವೆ, ಪವನಕುಮಾರ ಕಮ್ಮಾರ ಹಾಗೂ ಡಾ.ಪ್ರಕಾಶ ಬಳ್ಳಾರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.