ಕುಕನೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ರೈತಮಿತ್ರ ಎಂದು ಕರೆಯಲಾಗುವ ಎತ್ತುಗಳ ಹೆಸರಿನಲ್ಲಿ ಈ ಹಬ್ಬ ಆಚರಿಸುವುದೆಂದರೆ ಕೃಷಿ ಕುಟುಂಬದವರಿಗೆ ಎಲ್ಲಿಲ್ಲದ ಹಿಗ್ಗು.
ಮಣ್ಣೆತ್ತು, ಗುಳ್ಳವ್ವ, ನಾಗಪ್ಪ, ಗಣಪತಿ ಹಾಗೂ ಜೋಕುಮಾರ- ಈ ಐದು ಹಬ್ಬಗಳಲ್ಲಿ ರೈತರು ಮಣ್ಣಿನ ಮೂರ್ತಿಗಳಿಗೆ ಪೂಜೆ ಮಾಡುತ್ತಾರೆ. ಮಣ್ಣು ಹಾಗೂ ಎತ್ತು- ಇವೆರಡೂ ಅನ್ನದಾತನ ಬದುಕಿಗೆ ಮಹತ್ವವಾದುದು. ಭೂತಾಯಿ ರೂಪವಾದ ಮಣ್ಣು ಹಾಗೂ ಬೇಸಾಯಕ್ಕೆ ಹೆಗಲು ಕೊಡುವ ಮಿತ್ರ ಎತ್ತು ಇವೆರಡರ ಸಂಗಮವಾದ ಮಣ್ಣೆತ್ತನ್ನು ಪೂಜಿಸುವ ಸಂಪ್ರದಾಯ ಬೆಳೆದುಬಂದಿದೆ. ಮಣ್ಣೆತ್ತಿನ ಪೂಜೆ ಮಾಡಿದರೆ ರೈತರ ಬದುಕು ಹಸನಾಗುತ್ತದೆ. ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.
ಪ್ರತಿ ವರ್ಷ ಮುಂಗಾರು ಹಂಗಾಮು ಆರಂಭವಾದ ನಂತರ ಬರುವ ಮೊದಲ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಇದಕ್ಕೂ ಮೊದಲು ಬರುವ ಕಾರ ಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳನ್ನು ಶೃಂಗರಿಸಿ ಮೆರವಣಿಗೆ ಮಾಡುವ ರೈತರು, ಮಣ್ಣೆತ್ತಿನ ಅಮಾವಾಸ್ಯೆ ದಿನ ತಮ್ಮ ಹೊಲಗಳಿಂದ ಮಣ್ಣು ತಂದು ಅದರಲ್ಲೇ ಬಸವನ ಮೂರ್ತಿಗಳನ್ನು ಮಾಡಿ ಪೂಜಿಸುತ್ತಾರೆ.
ಈ ಹೊತ್ತಲ್ಲಿ, ಹೊಲದಲ್ಲಿ ಮುಂಗಾರು ಬೆಳೆಗಳು ತಕ್ಕಮಟ್ಟಿಗೆ ಬೆಳೆದು ನಿಂತಿರುತ್ತವೆ. ಮಳೆ-ಬೆಳೆ ಇನ್ನಷ್ಟು ಉತ್ತಮವಾಗಿ ಬರಲಿ, ಮನೆಯಲ್ಲಿ ಧಾನ್ಯಗಳ ಕಣಜವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಮಣ್ಣಿನ ಬಸವಣ್ಣನಿಗೆ ಪೂಜೆ ಸಲ್ಲಿಸಲಾಗುತ್ತದೆ.
ಹೊಲದಲ್ಲಿ ಸದಾಕಾಲ ದುಡಿದು ಬಸವಳಿದ ಎತ್ತುಗಳಿಗೆ ಈ ದಿನ ವಿಶ್ರಾಂತಿ ನೀಡಲಾಗುತ್ತದೆ. ರೈತ ಕುಟುಂಬಗಳ ಮನೆಯಲ್ಲಿ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಹೋಳಿಗೆ, ಹುಗ್ಗಿ, ಬೆಲ್ಲದ ಬೇಳೆ, ಕರಿಗಡಬು, ಸಂಡಿಗೆ, ಹಪ್ಪಳ, ಭಜಿ ಇತ್ಯಾದಿಗಳನ್ನು ಮಾಡಿ ಮಣ್ಣೆತ್ತಿಗೆ ನೈವೇದ್ಯ ಮಾಡಲಾಗುತ್ತದೆ.
ಮರುದಿನ ಮಣ್ಣಿನ ಬಸವಣ್ಣನನ್ನು ಹೊಲದಲ್ಲಿ ಸ್ಥಾಪಿಸಿ ಪೂಜೆ ಮಾಡಲಾಗುತ್ತದೆ.. ನಾಗರ ಪಂಚಮಿ ದಿನ ಅಂದರೆ ಒಂದು ತಿಂಗಳ ನಂತರ ಮಣ್ಣಿನ ನಾಗಪ್ಪನ ಜತೆ ಮಣ್ಣೆತ್ತುಗಳನ್ನು ಸಹ ಪೂಜೆ ಮಾಡಿ ಹೊಲದಲ್ಲಿ ಇಟ್ಟು ಇಷ್ಟಾರ್ಥಗಳ ಈಡೇರಿಕೆಗೆ ರೈತರು ಪ್ರಾರ್ಥಿಸುತ್ತಾರೆ. ರೈತರ ಜತೆಗೆ ಇತರರು ಕೂಡ ತಮ್ಮ ಮನೆಗಳಲ್ಲಿ ಅಮಾವಾಸ್ಯೆ ದಿನ ಮಣ್ಣೆತ್ತಿಗೆ ಪೂಜೆ ಮಾಡಿ ಗೌರವ ಸಲ್ಲಿಸುವ ರೂಢಿ ಉತ್ತರ ಕರ್ನಾಟಕ ಭಾಗದಲ್ಲಿ ಮೊದಲಿನಿಂದಲೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.