ADVERTISEMENT

ಕೊಟ್ಟ ಮಾತಿನಂತೆ ನಡೆಯದ ಕಾಂಗ್ರೆಸ್‌: ‘ಮುಖ್ಯಮಂತ್ರಿ’ ಚಂದ್ರು ಆರೋಪ

ಶೌಚಾಲಯ ಕೊರತೆ; ಪ್ರಜಾವಾಣಿ ವರದಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 13:39 IST
Last Updated 12 ಅಕ್ಟೋಬರ್ 2023, 13:39 IST
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು   

ಕೊಪ್ಪಳ: ‘ಜನರಲ್ಲಿ ಸಾಕಷ್ಟು ಆಸೆ ಮೂಡಿಸಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್‌ನ ನೈಜ ಬಂಡವಾಳ ಏನು ಎನ್ನುವುದು ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿಯೇ ಜನರಿಗೆ ಗೊತ್ತಾಗಿದೆ. ಈಗಿನ ರಾಜ್ಯ ಸರ್ಕಾರದ ಕೆಟ್ಟ ಆಡಳಿತದಿಂದಾಗಿ ಜನರಿಗೆ ಭ್ರಮನಿರಸನವಾಗಿದೆ’ ಎಂದು ಅಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆರೋಪಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಜೊತೆಗೂಡಿ ಬಿಜೆಪಿಯನ್ನು ಸೋಲಿಸಲು ಹೋರಾಡುತ್ತೇವೆ. ರಾಜ್ಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ಇದು ನನ್ನ ತೀರ್ಮಾನವಾಗಿದ್ದು, ಇದರ ಬಗ್ಗೆ ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸುತ್ತೇನೆ’ ಎಂದು ಗುರುವಾರ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನನಗೆ ಪಕ್ಷ ಹೊಸ ಜವಾಬ್ದಾರಿ ನೀಡಿದ ಬಳಿಕ ಸಂಘಟನೆಗೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದೆಹಲಿಯ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಭರವಸೆ ನೀಡಿ ಅನುಷ್ಠಾನಕ್ಕೆ ತಂದಂತೆಯೇ ಕಾಂಗ್ರೆಸ್‌ ರಾಜ್ಯದಲ್ಲಿ ಗ್ಯಾರಂಟಿ ಅಸ್ತ್ರಗಳನ್ನು ಪ್ರಯೋಗ ಮಾಡಿ ಅಧಿಕಾರ ಪಡೆಯಿತು. ನಮ್ಮ ಪಕ್ಷದ ಯೋಜನೆಗಳನ್ನು ಯಥಾವತ್ತು ನಕಲು ಮಾಡಿದರೂ ಸಮರ್ಪಕವಾಗಿ ಅನುಷ್ಠಾನ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಪರಿಶಿಷ್ಟ ಸಮುದಾಯ ಹಣವನ್ನೂ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದೆ’ ಎಂದು ದೂರಿದರು.

ADVERTISEMENT

‘ಭ್ರಷ್ಟಾಚಾರದ ಕಾರಣಕ್ಕಾಗಿ ಅನೇಕರು ಜೈಲಿಗೆ ಹೋಗಿದ್ದಾರೆ. ಆದರೆ ರಾಜ್ಯದ ಜನರ ಹಿತದ ಉದ್ದೇಶದಿಂದ ಜೈಲಿಗೆ ಹೋದರೆ ತಪ್ಪೇನೂ ಇಲ್ಲ. ಆದ್ದರಿಂದ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಬಾರದು. ನಾಡಿನ ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ನಾವು ಎಲ್ಲ ಪಕ್ಷಗಳೊಂದಿಗೆ ಜೊತೆಗಿದ್ದೇವೆ. ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಚೆನ್ನಾಗಿ ಕೊಟ್ಟರೆ ಗ್ಯಾರಂಟಿ ಕೊಡುವ ಅಗತ್ಯವಿರಲಿಲ್ಲ’ ಎಂದರು.

ಇಲ್ಲಿ ಗವಿಸಿದ್ದೇಶ್ವರ ಮಠ ಮತ್ತು ಕನಕಗಿರಿ ತಾಲ್ಲೂಕಿನ ನವಲಿಗೆ ಭೇಟಿ ನೀಡಿ ಅಲ್ಲಿ ವಿವಿಧ ವರ್ಗದ ಜನರ ಜೊತೆ ಚರ್ಚಿಸಿದರು.

ಶೌಚಾಲಯ ಕೊರತೆ; ಪ್ರಜಾವಾಣಿ ವರದಿ ಉಲ್ಲೇಖ

ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಸರಿಯಾಗಿ ಸೌಲಭ್ಯಗಳನ್ನು ಕಲ್ಪಿಸದೇ ಸರ್ಕಾರ ಅವುಗಳನ್ನು ಕೊಲೆ ಮಾಡುತ್ತಿದೆ ಎಂದು ಚಂದ್ರು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರದ ಸಂಚಿಕೆಯಲ್ಲಿ ‘ಪ್ರಜಾವಾಣಿ’ಯ ಮುಖಪುಟದಲ್ಲಿ ಕುಷ್ಟಗಿಯ ‘ಸಾವಿರ ವಿದ್ಯಾರ್ಥಿನಿಯರಿಗೆ ಇರುವುದೊಂದೇ ಶೌಚಾಲಯ’ ವಿಶೇಷ ವರದಿ ಪ್ರಸ್ತಾಪಿಸಿದ ಅವರು ‘ಸರ್ಕಾರಿ ಕಾಲೇಜುಗಳಲ್ಲಿ ಬಡವರ ಮಕ್ಕಳು ಓದುತ್ತಾರೆ. ಅಲ್ಲಿ ಶೌಚಾಲಯ ನಿರ್ಮಿಸಲು ಸರ್ಕಾರಕ್ಕೆ ಏನು ದಾಡಿ’ ಎಂದು ಕಟುವಾಗಿ ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡತನದ ಹಿನ್ನೆಲೆಯಿಂದ ಬಂದವರು. ಬಡವರ ಕಷ್ಟದ ಬಗ್ಗೆ ಅವರಿಗೆ ಗೊತ್ತಿದೆ. ವಿಶೇಷ ಕಾಳಜಿ ವಹಿಸಿ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.