ADVERTISEMENT

ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:19 IST
Last Updated 19 ಆಗಸ್ಟ್ 2024, 13:19 IST
ಆರೋಪಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ
ಆರೋಪಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ   

ಗಂಗಾವತಿ: ನಗರದ ಸಿಬಿಎಸ್ ರಸ್ತೆ ಮಾರ್ಗದಲ್ಲಿದ್ದ ಸುಕೋ ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಕಾರಗೃಹದಲ್ಲಿ ಸೆರೆವಾಸದ ವೇಳೆ ತಪ್ಪಿಸಿಕೊಂಡು, ನಾಪತ್ತೆಯಾಗಿದ್ದ ಆರೋಪಿಯನ್ನು 15 ವರ್ಷಗಳ ನಂತರ ತೆಲಂಗಾಣದಲ್ಲಿ ಗಂಗಾವತಿ ಪೊಲೀಸರು ಬಂಧಿಸಿದ ಘಟನೆ ಈಚೆಗೆ ಬೆಳಕಿಗೆ ಬಂದಿದೆ.

2009ರಲ್ಲಿ ಸುಕೋ ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರರು ಸಿಬ್ಬಂದಿಗೆ ಬೆದರಿಕೆ ಹಾಕಿ, ದರೋಡೆ ಮಾಡಿದ್ದರು. ಈ ಪ್ರಕರಣದಲ್ಲಿನ ಆರೋಪಿ ಇಲಕಲ್ ಗ್ರಾಮದ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಆರೋಪಿಯುವ 2010ರಲ್ಲಿ ಕೊಪ್ಪಳ ಜಿಲ್ಲಾ ಕಾರಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತನ ಪತ್ತೆಗೆ ಹಲವು ದಿನಗಳವರೆಗೆ ಶೋಧ ನಡೆಸಿದ ಪೊಲೀಸರಿಗೆ ಸಿಕ್ಕಿರಲಿಲ್ಲ. ನಂತರ ಆರೋಪಿ ತೆಲಂಗಾಣ ರಾಜ್ಯದ ಬುಡಾನ ಪೊಚಂಪಲ್ಲಿ ಮಂಡಲದ ಭುವನರುಶಿ ಪೇಟಾದಲ್ಲಿ ವಾಸವಿರುವ ಬಗ್ಗೆ ಮಾಹಿತಿ ಲಭಿಸಿತ್ತು.

ADVERTISEMENT

ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪೊಲೀಸ್‌ ಪಾಟೀಲ ಅವರ ಮಾರ್ಗದರ್ಶನದಲ್ಲಿ ಗಂಗಾವತಿ ನಗರಠಾಣೆ ಪಿಐ ಪ್ರಕಾಶ ಮಾಳೆ, ಪೋಲಿಸ್ ಸಿಬ್ಬಂದಿ ಇಸ್ಮಾಯಿಲ್, ಚಿರಂಜೀವಿ, ಮರಿಶಾಂತಗೌಡ, ವಿಶ್ವನಾಥ, ಮೈಲಾರಪ್ಪ, ಪ್ರಸಾದ, ಮಂಜುನಾಥ ಅವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆರೋಪಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಅವರು ಆಧಾರ್ ಕಾರ್ಡ್‌ನಲ್ಲಿ ಪಲ್ವಾರಿ ವಿರೇಶಂ ತಿಮ್ಮಣ್ಣ ಎಂದು ಹೆಸರು ಬದಲಾಯಿಸಿಕೊಂಡು ತಲೆಮರಿಸಿಕೊಂಡಿದ್ದರು. ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಎಸ್‌ಪಿ ಅವರು ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.