ADVERTISEMENT

ಗಂಗಾವತಿ | ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಆರೋಪ; ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 7:47 IST
Last Updated 1 ಆಗಸ್ಟ್ 2023, 7:47 IST

ಗಂಗಾವತಿ: ಬೇರೊಬ್ಬರ ಹೆಸರಿನಲ್ಲಿದ್ದ ಆಸ್ತಿಯನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಮಾರಿದ ಕುರಿತು ಸುದರ್ಶನ ತಿಡಿಗೋಳ ಎಂಬುವರು ನೀಡಿದ ದೂರಿನನ್ವಯ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಸವರಾಜ ರಾರಾವಿ, ಮಂಜುನಾಥ ಕೊಡಕೇರಿ, ಹನುಮಂತ ಅಲಿಯಾಸ್ ರಮೇಶ ಆನಂದಿ, ರಮೇಶ ಶಾಮಣ್ಣ ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಂಚನೆಗೆ ಸಂಬಂಧಿಸಿದ್ಂತೆ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸುದರ್ಶನ ದೂರು ನೀಡಿದ್ದರು. ಎಸ್ಪಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಗಂಗಾವತಿ ನಗರಠಾಣೆ ಪಿಐ ಅಡಿವೆಪ್ಪ ಗುದಿಗೊಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ADVERTISEMENT

ಖರೀದಿದಾರರಿಗೆ ಜಮೀನು ತೋರಿಸಿ, ಪಹಣಿ ನೀಡಿ ವಂಚಿಸಿದ ನಾಸೀರ್ ಮತ್ತು ರೇಣುಕಮ್ಮ ಎಂಬ ಆರೋಪಿಗಳ ಪತ್ತೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ನಡೆದಿದ್ದೇನು?: ಗಂಗಾವತಿ ತಾಲ್ಲೂಕಿನ ಢಣಾಪುರ ಗ್ರಾಮದಲ್ಲಿ ಸರ್ವೆ ನಂ 89/2 ರಲ್ಲಿನ 4 ಎಕರೆ 10 ಗುಂಟೆ ಜಮೀನು ಹನುಮಂತಪ್ಪ ಮಾರೆಪ್ಪ ಚೌಡ್ಕಿ ಎಂಬುವವರ ಹೆಸರಲ್ಲಿತ್ತು.

ವಡ್ಡರಹಟ್ಟಿ ಗ್ರಾಮದ ಬಸವರಾಜ ರಾರಾವಿ, ಬಸಾಪಟ್ಟಣದ ಮಂಜುನಾಥ ಕೊಡಕೇರಿ, ಅಣ್ಣಿಗೇರಿಯ ಹಣಮಂತ ಅಲಿಯಾಸ್ ರಮೇಶ ಆನಂದಿ ಸೇರಿಕೊಂಡು ಮೂಲ ಜಮೀನು ಮಾಲೀಕನ ಬದಲಿಸಿ ಬೇರೆಯವರ ಹೆಸರು ಹಾಕಿ ಖೊಟ್ಟಿ ದಾಖಲೆ ಸೃಷ್ಟಿಸಿದ್ದರು.

ಬಳಿಕ ಸುದರ್ಶನ ಮತ್ತು ಅವರ ಸಂಬಂಧಿಕರಿಗೆ ಜಮೀನು ಮಾರಿದ್ದರು. ಅನುಮಾನ ಬಂದು ದಾಖಲೆಗಳು ಪರಿಶೀಲಿಸಿದಾಗ ಸುದರ್ಶನ ಅವರಿಗೆ ಮೋಸವಾಗಿರುವುದು ತಿಳಿದಿದೆ. ಬಳಿಕ ಅವರು ‘ಖೊಟ್ಟಿ ದಾಖಲೆ ನೀಡಿ, ಬೇರೊಬ್ಬರ ಆಸ್ತಿ ಮಾರಾಟ ಮಾಡಿದ್ದಾರೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.