ADVERTISEMENT

ಮಕ್ಕಳ ತಟ್ಟೆಯಿಂದ ಮೊಟ್ಟೆ ಕಸಿದ ಆರೋಪ: ಇಬ್ಬರು ಅಮಾನತು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 21:01 IST
Last Updated 10 ಆಗಸ್ಟ್ 2024, 21:01 IST
ಮಕ್ಕಳಿಗೆ ವಿತರಿಸುವ ಮೊಟ್ಟೆ
ಮಕ್ಕಳಿಗೆ ವಿತರಿಸುವ ಮೊಟ್ಟೆ   

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲ್ಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರ 2ರಲ್ಲಿ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ ಬಳಿಕ ವಾಪಸ್‌ ಕಸಿದುಕೊಂಡ ಆರೋಪದ ಮೇಲೆ ಅಲ್ಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಗೌರವಧನ ಸೇವೆಯಿಂದ ಅಮಾನತು ಮಾಡಲಾಗಿದೆ.

‘ಕ್ಷೇತ್ರ ವ್ಯಾಪ್ತಿಯ ಕನಕಗಿರಿ ವಲಯದ ಸಿಡಿಪಿಒ ವಿರೂಪಾಕ್ಷಿ ಅವರನ್ನೂ ಅಮಾನತು ಮಾಡಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚಿಸಿದ್ದಾರೆ.     

ಮಧ್ಯಾಹ್ನದ ಊಟಕ್ಕೆ ಕುಳಿತಿದ್ದ ಮಕ್ಕಳ ತಟ್ಟೆಗೆ ಅಂಗನವಾಡಿ ಸಹಾಯಕಿ ಮೊದಲು ಮೊಟ್ಟೆ ಹಾಕಿದರು. ಮಕ್ಕಳು ಅದನ್ನು ಬಾಯಲ್ಲಿ ಇಟ್ಟುಕೊಳ್ಳುವ ವೇಳೆಗೆ ಅದನ್ನು ಕಸಿದುಕೊಂಡು ತಟ್ಟೆಯಿಂದಲೇ ತೆಗೆದು ಹಾಕಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಸಿಬ್ಬಂದಿಯ ಈ ಕಾರ್ಯವೈಖರಿಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಜೆ., ಸಹಾಯಕಿ ಶೈನಾಜ್ ಬೇಗಂ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 

‘ಗುಂಡೂರಿನ ಅಂಗನವಾಡಿ ಕೇಂದ್ರಕ್ಕೆ ಪೂರೈಕೆಯಾಗಿರುವ ಮೊಟ್ಟೆಯನ್ನು ಮಕ್ಕಳ ತಟ್ಟೆಗೆ ಹಾಕಿ ಬಳಿಕ ವಾಪಸ್‌ ಪಡೆದು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಯ ಜಿಲ್ಲೆಯ ಡಿ.ಡಿ. ತಿಪ್ಪಣ್ಣ ಅವರಿಗೂ ನೋಟಿಸ್‌ ಜಾರಿ ಮಾಡುವಂತೆ ಸಚಿವೆ ಸೂಚಿಸಿದ್ದಾರೆ.

ಮೊಟ್ಟೆ ವಿತರಣೆ ವೇಳೆ ವಿಡಿಯೊ ಚಿತ್ರೀಕರಣ ಕಡ್ಡಾಯ ಮಾಡಿದ್ದರಿಂದಲೇ ಈ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಸಂಪೂರ್ಣ ತನಿಖೆಗೆ ಸೂಚಿಸಿದ್ದೇನೆ
ಲಕ್ಷ್ಮೀ ಹೆಬ್ಬಾಳಕರ್‌ ಸಚಿವೆ
‘ಮೊಟ್ಟೆ ಕೊಳೆತಿದ್ದವು’
ಈ ಕುರಿತು ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಜೆ ‘ಮಕ್ಕಳಿಗೆ ನೀಡಲಾಗಿದ್ದ ಮೊಟ್ಟೆ ಕೊಳೆತಿದ್ದವು. ಆದ್ದರಿಂದ ವಾಪಸ್‌ ಪಡೆದು ಬೇರೆ ಮೊಟ್ಟೆ ತಂದು ಮಕ್ಕಳ ಜೊತೆ ಮನೆಗೆ ಕೊಟ್ಟು ಕಳುಹಿಸಲಾಗಿದೆ. ವಾಸ್ತವದಲ್ಲಿ ಆಗಿದ್ದು ಇಷ್ಟೇ. ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಕಸಿಯುವಷ್ಟು ಕ್ರೂರತೆ ನನಗಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.