ಹನುಮಸಾಗರ: ಸಮೀಪದ ಕಾಟಾಪುರ ಗ್ರಾಮದಲ್ಲಿ 17 ವರ್ಷಗಳ ಹಿಂದೆ ಆರಂಭವಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಪ್ರತಿ ವರ್ಷವೂ ಉತ್ತಮ ಫಲಿತಾಂಶವನ್ನು ಪಡೆಯುವುದರ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲೆಯ ಗಮನ ಸೆಳೆದಿದೆ.
2006-07ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಈ ಶಾಲೆಯು 2011-12ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿ ಸುಸಜ್ಜಿತ ಕಲಿಕಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.
2010-11ರಿಂದ 2023-24 ರವರೆಗೆ ಶಾಲೆಯ ಒಟ್ಟು 14 ಬ್ಯಾಚ್‌ಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದುಕೊಂಡಿವೆ. 2023-24ನೇ ಸಾಲಿನಲ್ಲಿ ಕರ್ನಾಟಕದ 798 ವಸತಿ ಶಾಲೆಗಳ ಉತ್ತಮ ಫಲಿತಾಂಶದ ಪಟ್ಟಿಯಲ್ಲಿ ಕಾಟಾಪುರ ಮೊರಾರ್ಜಿ ವಸತಿ ಶಾಲೆಯು 18ನೇ ಸ್ಥಾನ ಪಡೆದುಕೊಂಡಿದೆ.
‘ಪ್ರಸಕ್ತ ವರ್ಷದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶದೊಂದಿಗೆ 45 ವಿದ್ಯಾರ್ಥಿಗಳಲ್ಲಿ 31 ಮಂದಿ ಅತ್ಯುನ್ನತ ಶ್ರೇಣಿ, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಆಗುವುದರೊಂದಿಗೆ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ’ ಎಂದು ಹೇಳುತ್ತಾರೆ ಶಾಲೆಯ ಪ್ರಾಂಶುಪಾಲ ಶಿವಕುಮಾರ ಚೋಳಚಗುಡ್ಡ.
‘2021–22ನೇ ಸಾಲಿನಲ್ಲಿ ಈ ವಸತಿ ಶಾಲೆಯ ಅಭಿಷೇಕ ಗ್ವಾತಗಿ ಎಂಬ ವಿದ್ಯಾರ್ಥಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದರು. ಆ ಮೂಲಕ ಸರ್ಕಾರದ ₹1 ಲಕ್ಷ ಬಹುಮಾನವನ್ನು ಕೊಪ್ಪಳ ಜಿಲ್ಲಾಧಿಕಾರಿ ಅವರಿಂದ ಪಡೆದುಕೊಂಡಿದ್ದರು’ ಎಂದು ಪ್ರಾಂಶುಪಾಲರು ತಿಳಿಸಿದರು.
ಶಾಲೆಯು ಸುಸಜ್ಜಿತ ಕೊಠಡಿಗಳು, ಪ್ರಯೋಗಾಲಯ, ಕ್ರೀಡಾಂಗಣ, ಶುದ್ಧ ಕುಡಿಯುವ ನೀರಿನ ಘಟಕ ಹೊಂದಿದೆ. ಒಟ್ಟು 9 ಜನ ಕಾಯಂ ಬೋಧಕ ಸಿಬ್ಬಂದಿ, ಇಬ್ಬರು ಅತಿಥಿ ಶಿಕ್ಷಕರು ಹಾಗೂ ಮೂವರು ಬೋಧಕೇತರ ಸಿಬ್ಬಂದಿ ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಮಕ್ಕಳ ಆರೋಗ್ಯ ಕಾಳಜಿಗೆ ನರ್ಸಿಂಗ್ ಸಿಬ್ಬಂದಿಯೂ ಇದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ದೈನಂದಿನ ಕಾರ್ಯ ಚಟುವಟಿಕೆಗಳು ಬೆಳಗಿನ ಜಾವ 5.30ರಿಂದ ಆರಂಭವಾಗಿ ರಾತ್ರಿ 10.30ರವರೆಗೆ ನಿರಂತರವಾಗಿರುತ್ತವೆ. ಮಕ್ಕಳ ಕಲಿಕಾಮಟ್ಟ ಸುಧಾರಣೆಗಾಗಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಪ್ರಾರ್ಥನಾ ಸಮಯದಲ್ಲೂ ಮಕ್ಕಳಿಂದ ಕಲಿಕಾಂಶಗಳನ್ನು ಹೇಳಿಸುವುದು, ಕಲಿಕೆಯಲ್ಲಿ ಪ್ರಾಯೋಗಿಕ ಪಾಠ ತಂತ್ರಜ್ಞಾನ ಅಳವಡಿಕೆ ಹಾಗೂ ಲ್ಯಾಬ್‌ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳನ್ನು ಉತ್ತಮ ಕಲಿಕೆಗೆ ಅಣಿಗೊಳಿಸಲಾಗುತ್ತಿದೆ.
ನಮ್ಮ ಶಾಲೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ಊರಿನ ಶಿಕ್ಷಣ ಪ್ರೇಮಿಗಳ, ಪಾಲಕರ ಸಹಕಾರದಿಂದ ಗುಣಮಟ್ಟದ ಬೋಧನೆ ಮಾಡಿದ ಪರಿಣಾಮ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ.–ಶಿವಕುಮಾರ ಚೋಳಚಗುಡ್ಡ, ಪ್ರಾಂಶುಪಾಲ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಟಾಪುರ
ಜಿಲ್ಲೆಯಲ್ಲಿಯೇ ಉತ್ತಮ ವಸತಿ ಶಾಲೆ ಎನ್ನುವುದು ಹೆಮ್ಮೆಯ ಸಂಗತಿ. ಇಲ್ಲಿನ ಶಿಕ್ಷಕರ ಗುಣಮಟ್ಟದ ಬೋಧನೆ, ಶಿಸ್ತು ಮತ್ತು ಮಕ್ಕಳೊಂದಿಗೆ ಶಿಕ್ಷಕರ ಸದಾ ಒಡನಾಟದಿಂದ ರಾಜ್ಯದ 798 ವಸತಿ ಶಾಲೆಗಳ ಪೈಕಿ 18ನೇ ಸ್ಥಾನ ಪಡೆದಿದೆ.–ರೇವಣ್ಣ ಗುರಿಕಾರ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಸಶಸ್ತ್ರ), ಶಾಲೆ ಹಳೆಯ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.