ಕೊಪ್ಪಳ: ಯೋಧರಾಗಿ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಉತ್ತರ ಕರ್ನಾಟಕದ ಸಾವಿರಾರು ಯುವಕರ ಕಣ್ಣುಗಳಲ್ಲಿ ಈಗ ಸಾಧನೆಯ ಹುಮ್ಮಸ್ಸು ಕಾಣುತ್ತಿದೆ. ಅವರಲ್ಲಿನ ಬುದ್ಧಿವಂತಿಕೆ, ದೈಹಿಕ ಸಾಮರ್ಥ್ಯದ ಪರೀಕ್ಷೆಗೆ ನ.26 (ನಾಳೆಯಿಂದ)ರಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ‘ಅಗ್ನಿಪರೀಕ್ಷೆ’ ನಿಗದಿಯಾಗಿದೆ.
ಜಿಲ್ಲಾಡಳಿತದ ಸಹಯೋಗ ದೊಂದಿಗೆ ಬೆಳಗಾವಿಯ ಸೇನಾ ನೇಮಕಾತಿ ತಂಡವೂ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ 9,130 ಯುವಜನತೆಯ ಪರೀಕ್ಷೆಗೆ ಸಿದ್ಧವಾಗಿದೆ. 26ರಿಂದ ಡಿ.8ರವರೆಗೆ ಜಿಲ್ಲಾವಾರು ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಮೊದಲ ದಿನ ಮಾರ್ಷಲ್ ಏರಿಯಾದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸಿ 100 ಜನರನ್ನು ಒಳಗೊಂಡು ಹಲವು ತಂಡಗಳನ್ನು ರಚಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನೀಡಿದ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಮೊದಲ ಅರ್ಹತಾ ಮಾನದಂಡವಾಗಿ 100 ಜನರ ಪ್ರತಿ ತಂಡಕ್ಕೆ ಎರಡು ಬ್ಯಾಚ್‌ಗಳಲ್ಲಿ ಒಟ್ಟು 1600 ಮೀಟರ್ ಓಡಿಸಲಾಗುತ್ತದೆ. ಸೇನಾ ನೇಮಕಾತಿ ನಿಯಮದ ಪ್ರಕಾರ ಐದು ನಿಮಿಷ 45 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದವರು ಮುಂದಿನ ದೈಹಿಕ ಕ್ಷಮತೆ, ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ.
ಮಾನದಂಡಕ್ಕೆ ಅನುಗುಣವಾಗಿ ಸಾಮರ್ಥ್ಯ ತೋರಿಸಿದವರ ಪರೀಕ್ಷೆ ಮುಗಿದ ಒಂದೆರೆಡು ತಿಂಗಳ ಒಳಗೆ ಫಲಿತಾಂಶ ಬರಲಿದ್ದು, ಅವರಿಗೆ ಬೆಳಗಾವಿ ಸೇನಾ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ಅಲ್ಲಿ ಅವರಿಗೆ ಸೇನೆಯ ಘಟಕಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತದೆ. ನಿರ್ದಿಷ್ಟವಾಗಿ ಇಂತಿಷ್ಟೇ ಜನರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನೇಮಕಾತಿ ತಂಡ ಗುರಿ ನಿಗದಿಪಡಿಸಿಕೊಂಡಿಲ್ಲ. ಅರ್ಹತಾ ಗುರಿ ಮೀರಿ ಸಾಧನೆ ಮಾಡಿದವರನ್ನು ಮಾತ್ರ ನೇಮಕಾತಿಗೆ ಪರಿಗಣಿಸಲಾಗುತ್ತದೆ.
ಬೆಳಗಾವಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳು ಈ ರ್‍ಯಾಲಿನಲ್ಲಿ ಭಾಗವಹಿಸಲಿದ್ದಾರೆ.
ನ.26ರಿಂದ ಡಿ.5ರ ತನಕ ನಿರ್ದಿಷ್ಟವಾಗಿ ಆಯಾ ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಈಗಾಗಲೇ ವೇಳಾಪಟ್ಟಿ ತಯಾರಿಸಲಾಗಿದೆ. 6ರಂದು ಸೇನೆಯ ತಾಂತ್ರಿಕ ತಂಡ (296), ಕಚೇರಿ ಸಹಾಯಕ (27), ಸ್ಟೋರ್ ಕೀಪರ್ ಟೆಕ್ನಿಕಲ್ (203) ಮತ್ತು ಕಚೇರಿ ಸಿಬ್ಬಂದಿ (16) ಹುದ್ದೆಗಳಿಗೆ ನೇಮಕಾತಿ ಜರುಗಲಿದ್ದು, ಇದಕ್ಕೆ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳಿಗೂ ಅವಕಾಶವಿದೆ. ಇದಕ್ಕಾಗಿ 542 ಜನ ಹೆಸರು ನೋಂದಾಯಿಸಿದ್ದಾರೆ. ಅಭ್ಯರ್ಥಿಗಳಿಗೆ ಮಳೆಮಲ್ಲೇಶ್ವರ ದೇವಸ್ಥಾನ, ಸಾಹಿತ್ಯ ಭವನ, ಪೊಲೀಸ್ ಭವನ ಹಾಗೂ ಹೊಸ ರಂಗಮಂದಿರದಲ್ಲಿ ಇರಲು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಸೇನಾ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತದೆ. ಕೊಪ್ಪಳ ಜಿಲ್ಲಾಡಳಿತ ಉತ್ತಮ ಸಹಕಾರ ನೀಡುತ್ತಿದೆ. ನಮ್ಮಂತೆ ಯುವಜನತೆ ಕೂಡ ಯೋಧರಾಗಲು ರ್‍ಯಾಲಿ ನೆರವಾಗಲಿದೆ
-ಆರ್.ಎಂ. ಲೋಹಿಯಾ ಬೆಳಗಾವಿಯ ಸೇನಾ ನೇಮಕಾತಿ ಸಹಾಯಕ ನೇಮಕಾತಿ ಅಧಿಕಾರಿ
ರ್‍ಯಾಲಿಯಲ್ಲಿ ಜಿಲ್ಲೆಯ 450 ಜನ ಅಭ್ಯರ್ಥಿಗಳು ಪಾಲ್ಗೊಳ್ಳುವರು. ಅವರಲ್ಲಿ ಶಿಸ್ತು ಧೈರ್ಯ ಹಾಗೂ ಸಾಧನೆಯ ಛಲ ಮೂಡಲು ಇಂಥ ರ್‍ಯಾಲಿ ನಮ್ಮ ಜಿಲ್ಲೆಯಲ್ಲಿ ನಡೆಯುವುದು ಅಗತ್ಯವಿತ್ತು. ಎಲ್ಲ ಸಿದ್ಧತೆ ಮಾಡಿದ್ದೇವೆ.
-ನಲಿನ್ ಅತುಲ್ ಜಿಲ್ಲಾಧಿಕಾರಿ ಕೊಪ್ಪಳ
ಯಾವ ಜಿಲ್ಲೆಯವರಿಗೆ ಎಂದು ಅವಕಾಶ?
ದಿನಾಂಕ;ಜಿಲ್ಲೆ;ನೋಂದಾಯಿತರು ನವೆಂಬರ್ 26;ಬೆಳಗಾವಿ;700 ನ.27;ಬೆಳಗಾವಿ;850 ನ.28;ಬೆಳಗಾವಿ ಕಲಬುರಗಿ;900 ನ.29;ಬೆಳಗಾವಿ ಕಲಬುರಗಿ;900 ನ.30;ಬೆಳಗಾವಿ ಕಲಬುರಗಿ;900 ಡಿಸೆಂಬರ್ 1;ಬೆಳಗಾವಿ ಕಲಬುರಗಿ;900 ಡಿಸೆಂಬರ್ 2;ಬೆಳಗಾವಿ ಕಲಬುರಗಿ;900 ಡಿಸೆಂಬರ್ 3;ಬೆಳಗಾವಿ ಕಲಬುರಗಿ;850 ಡಿಸೆಂಬರ್ 4;ಬೆಳಗಾವಿ ಕಲಬುರಗಿ;833 ಡಿಸೆಂಬರ್ 5;ಕೊಪ್ಪಳ ಬೀದರ್ ರಾಯಚೂರು ಯಾದಗಿರಿ;855 ಡಿಸೆಂಬರ್ 6;ಎಲ್ಲ ಜಿಲ್ಲೆಗಳು;542
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.