ಕುಷ್ಟಗಿ: ಪಟ್ಟಣದಲ್ಲಿರುವ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರದ ಕಚೇರಿಗಳ ಮುಂದೆ ಅನಧಿಕೃತ ಡಬ್ಬಾ ಅಂಗಡಿಗಳು ಹುಟ್ಟಿಕೊಂಡಿದ್ದು ಕಚೇರಿಗಳನ್ನೇ ಮರೆಮಾಚಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಿಂಧನೂರು ರಸ್ತೆಯಲ್ಲಿರುವ ಕೃಷಿ ಇಲಾಖೆ ಕಚೇರಿ ಕಾಣುವುದೇ ಇಲ್ಲ, ಎಷ್ಟೋ ಜನರು ಕೆಲ ಸಂದರ್ಭಗಳಲ್ಲಿ ಕಚೇರಿ ಹುಡುಕುವುದಕ್ಕೆ ಪರದಾಡುತ್ತಿರುತ್ತಾರೆ. ನಾಮಫಲಕವೂ ಕಾಣುತ್ತಿಲ್ಲ. ಅನೇಕ ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರೈತರಾದ ವೀರಭದ್ರಗೌಡ ಕಂದಕೂರು, ಮಲ್ಲೇಶಪ್ಪ ಇತರರು ಅಸಮಾಧಾನ ಹೊರಹಾಕಿದರು.
ಮುಖ್ಯ ರಸ್ತೆ ಬದಿಯಲ್ಲಿ ಅಣಬೆಯಂತೆ ಹುಟ್ಟಿಕೊಂಡಿರುವ ಡಬ್ಬಾ ಅಂಗಡಿಗಳಿಗೆ ಯಾವುದೇ ರೀತಿಯ ಪರವಾನಗಿ ಇಲ್ಲ. ಆದರೆ ಅನಧಿಕೃತ ಎಂಬುದು ತಿಳಿದಿದ್ದರೂ ಪುರಸಭೆ ಈ ಬಗ್ಗೆ ಅಂಗಡಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ರಾಜಕೀಯ ಪ್ರಭಾವ ಹೊಂದಿರುವ ಕೆಲ ಪಟ್ಟಭದ್ರರು ಸರ್ಕಾರದ ಜಾಗದಲ್ಲಿ ಅನಧಿಕೃತ ಡಬ್ಬಾ ಅಂಗಡಿ ಇಡುವುದು, ನಂತರ ಅವುಗಳನ್ನು ಮಾಸಿಗೆ ದುಬಾರಿ ಬಾಡಿಗೆ ಆಧಾರದ ಮೇಲೆ ಬೇರೆಯವರಿಗೆ ವಹಿಸಿಕೊಟ್ಟು ಅನಾಯಾಸವಾಗಿ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ಬಾಡಿಗೆ ಹಣ ಜೇಬಿಗಿಳಿಸುತ್ತಿದ್ದಾರೆ ಎಂದು ಜನರು ಆರೋಪಿಸಿದರು.
ಈ ವಿಷಯ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರ್‌ಅಲಿ ಬೆಟಗೇರಿ ಅವರನ್ನು ಸಂಪರ್ಕಿಸಿದಾಗ, ಕಚೇರಿಗಳು ಕಾಣದಂತೆ ಅಂಗಡಿಗಳನ್ನು ಇಟ್ಟುಕೊಳ್ಳಲಾಗಿದೆ. ಕಚೇರಿ ಕಾಣದಂತಾಗಿದ್ದು ಅವುಗಳನ್ನು ತೆರವುಗೊಳಿಸುವಂತೆ ಪುರಸಭೆಗೆ ಪದೇಪದೇ ಪತ್ರ ಬರೆಯುತ್ತ ಬರಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಹೇಳಿದ್ದು: ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಡಿ.ಎನ್. ಧರಣೇಂದ್ರಕುಮಾರ, ಕೃಷಿ ಇಲಾಖೆ ಮುಂದಿನವು ಅಷ್ಟೇ ಅಲ್ಲ. ಪಟ್ಟಣದ ರಸ್ತೆ ಬದಿಯಲ್ಲಿರುವ ಡಬ್ಬಾ ಅಂಗಡಿಗಳೆಲ್ಲವೂ ಅನಧಿಕೃತವೇ ಆಗಿವೆ. ಸ್ಥಳ ಬಾಡಿಗೆ ಮಾತ್ರ ವಸೂಲಿ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಆಗುವಂತಹ ಅಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಹೇಳಿದರು.
ಕಚೇರಿ ಎದುರು ಶೌಚದ ಗುಂಡಿ: ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿಯೇ ಅಂಗಡಿಯವರು ಶೌಚಾಲಯ ತ್ಯಾಜ್ಯದ ಗುಂಡಿ ನಿರ್ಮಿಸಿಕೊಂಡಿದ್ದಾರೆ. ಕಚೇರಿ ಆವರಣದಲ್ಲಿಯೇ ಇಂತಹ ಅಕ್ರಮಗಳು ನಡೆದರೂ ಕೃಷಿ ಅಧಿಕಾರಿ, ಸಿಬ್ಬಂದಿ ಮೌನವಹಿಸಿದ್ದಾರೆ. ಹೀಗೆ ಮುಂದುವರಿದರೆ ಕೆಲದಿನಗಳಲ್ಲಿ ಪ್ರಭಾವಿಗಳು ಕಚೇರಿ ಜಾಗವನ್ನು ಒತ್ತುವರಿ ಮಾಡಿಕೊಂಡರೂ ಅಚ್ಚರಿಯಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ರಜೆ ಇದ್ದ ದಿನಗಳಲ್ಲಿ ಶೌಚಾಲಯ ಗುಂಡಿಯನ್ನು ನಿರ್ಮಿಸಿಕೊಂಡಿದ್ದು ಗಮನಕ್ಕೆ ಬಂದಿರಲಿಲ್ಲ. ಅದನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಜ್ಮೀರ್‌ಅಲಿ ಬೆಟಗೇರಿ ಸ್ಪಷ್ಟಪಡಿಸಿದರು.
ಕೃಷಿ ಇಲಾಖೆ ಪತ್ರ ಬರೆದಿರುವುದು ಗಮನಕ್ಕೆ ಬಂದಿಲ್ಲ. ಶೀಘ್ರ ಸ್ಥಳ ಪರಿಶೀಲಿಸಿ ಅಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ.–ಡಿ.ಎನ್. ಧರಣೇಂದ್ರಕುಮಾರ, ಪುರಸಭೆ ಮುಖ್ಯಾಧಿಕಾರಿ
ಕೃಷಿ ಇಲಾಖೆ ಇರುವುದು ಬೇರೆಯವರಿಗೆ ಕಾಣುತ್ತಿಲ್ಲ ಎಂಬುದಷ್ಟೇ ಅಲ್ಲ. ಕೆಲವು ಬಾರಿ ನಾವೇ ದಾರಿ ತಪ್ಪಿ ಮುಂದೆ ಹೋಗಿದ್ದೇವೆ–ಅಜ್ಮೀರ್‌ಲಿ ಬೆಟಗೇರಿ, ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.