ADVERTISEMENT

ಕುಷ್ಟಗಿ | ಮುಂಗಾರು ಹಂಗಾಮು: ರೈತರ ನೆರವಿಗೆ ಕೃಷಿ ಇಲಾಖೆ ಸಜ್ಜು

ನಾರಾಯಣರಾವ ಕುಲಕರ್ಣಿ
Published 19 ಮೇ 2024, 5:32 IST
Last Updated 19 ಮೇ 2024, 5:32 IST
ಕುಷ್ಟಗಿ ಬಳಿ ರೈತ ಹೊನ್ನಪ್ಪ ನಿಡಶೇಸಿ ನೇಗಿಲು ಹೊಡೆದು ಹೊಲ ಹದಗೊಳಿಸಿದರು
ಕುಷ್ಟಗಿ ಬಳಿ ರೈತ ಹೊನ್ನಪ್ಪ ನಿಡಶೇಸಿ ನೇಗಿಲು ಹೊಡೆದು ಹೊಲ ಹದಗೊಳಿಸಿದರು   

ಕುಷ್ಟಗಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಸಂಬಂಧಿಸಿದಂತೆ ರೈತರಿಗೆ ನೆರವಾಗಲು ಕೃಷಿ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.

ಪೂರ್ವ ಮುಂಗಾರಿನಲ್ಲಿ ಬಿತ್ತನೆ ಕೈಗೊಳ್ಳಬೇಕಿರುವ ಹೆಸರು ಮತ್ತು ತೊಗರಿ ಬಿತ್ತನೆ ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದ್ದು ತಾವರಗೇರಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಹಾಯಧನದಲ್ಲಿ ಬೀಜ ವಿತರಣೆ ಆರಂಭಿಸಲಾಗಿದೆ. ಮೇ 21 ರಿಂದ ತಾಲ್ಲೂಕಿನ ಹನುಮನಾಳ, ಹನುಮಸಾಗರ, ಕುಷ್ಟಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ದೋಟಿಹಾಳ ಬೀಜ ವಿತರಣೆಗೆ ಹೆಚ್ಚುವರಿ ಕೇಂದ್ರದಲ್ಲಿ ಬೀಜ ವಿತರಣೆ ಪ್ರಕ್ರಿಯೆ ನಡೆಯಲಿದೆ. ಮಕ್ಕೆಜೋಳ, ಸಜ್ಜೆ ಬಿತ್ತನಗೆ ಜೂನ್‌ ತಿಂಗಳು ಸೂಕ್ತವಾಗಿದ್ದು ಆ ಬೀಜಗಳನ್ನು ಜೂನ್‌ ಮೊದಲ ವಾರದಿಂದ ವಿತರಿಸಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿನ 55 ಮಿ.ಮೀ ವಾಡಿಕೆ ಮಳೆಯ ಪೈಕಿ ಮೇ ತಿಂಗಳ 17ರ ವೇಳೆಗೆ 51.5 ಮಿಮೀ ಮಳೆಯಾಗಿದೆ. ಈ ತಿಂಗಳ ಅಂತ್ಯದ ನಂತರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದ್ದು ಈ ಬಾರಿ ಬಿತ್ತನೆಗೆ ಅನುಕೂಲ ದೊರೆಯಲಿದೆ. ಈ ಬಾರಿ ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿ 79 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ನಡೆಯುವ ಅಂದಾಜಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಜಮೀರ ಅಲಿ ಬೆಟಗೇರಿ ಮಾಹಿತಿ ನೀಡಿದರು.

ADVERTISEMENT

ಬಿತ್ತನೆ ಬೀಜಗಳನ್ನು ಅಗತ್ಯ ಪ್ರಮಾಣದಲ್ಲಿ ರೈತರಿಗೆ ಪೂರೈಸಲಾಗುತ್ತದೆ. ರಾಸಾಯನಿಕ ಗೊಬ್ಬರಗಳ ಕೊರೆಯೂ ಇಲ್ಲ, ಈಗಾಗಲೇ ಸಹಕಾರ ಸಂಘಗಳು, ಖಾಸಗಿ ಮಾರಾಟಗಾರರ ಬಳಿ 790 ಮೆಟ್ರಿಕ್‌ ಟನ್‌ ಡಿಎಪಿ ಹಾಗೂ1,251 ಟನ್ ಯೂರಿಯಾ ದಾಸ್ತಾನು ಮಾಡಲಾಗಿದೆ. ಯಾವುದೇ ಕೃಷಿ ಪರಿಕರಗಳ ಗುಣಮಟ್ಟವನ್ನು ಮೊದಲು ತಾವು ಖಾತರಿಪಡಿಸಿಕೊಂಡೇ ರೈತರಿಗೆ ವಿತರಿಸಬೇಕು. ಡಿಎಪಿಗೆ ಪ್ರತಿ ಚೀಲಕ್ಕೆ ರೂ 1,350 ಮತ್ತು ಯೂರಿಯಾ ರೂ 266ರ ನಿಗದಿತ ಎಂಆರ್‌ಪಿ ದರದಲ್ಲಿ ಮಾರಾಟ ಮಾಡುವಂತೆ ಖಾಸಗಿ ಮಾರಾಟಗಾರರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಭರಪೂರ ಬೆಳೆಗೆ ಬೀಜೋಪಚಾರ

‘ಬಿತ್ತನೆಗೆ ಮೊದಲು ಬೀಜಗಳಿಗೆ ಕೆಲ ಔಷಧಗಳಿಂದ ಬೀಜೋಪಚಾರ ಮಾಡುವುದು ಅಗತ್ಯ. ಅದರಿಂದ ಬಹಳಷ್ಟು ಪ್ರಯೋಜನ ಇರುವುದನ್ನು ರೈತರಿಗೆ ಕೃಷಿ ಇಲಾಖೆ ಮನವರಿಕೆ ಮಾಡಿಕೊಡುತ್ತಿದ್ದರೂ ರೈತರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ’ ಬೀಜೋಪಚಾರದಿಂದ ಆಗುವ ಪ್ರಯೋಜನ ಕುರಿತು ಕೃಷಿ ಅಧಿಕಾರಿ ಅಜಮೀರ್ ಅಲಿ ಬೆಟಗೇರಿ ಹೇಳಿದರು. 

‘ಬಿತ್ತನೆ ಬಳಿಕ ಮಳೆ ಕಡಿಮೆಯಾದರೂ ಅದನ್ನು ತಡೆದುಕೊಳ್ಳುವುದು ನಂತರ ಮಳೆಯಾದರೆ ಚೇತರಿಸಿಕೊಳ್ಳುವ ಶಕ್ತಿ ಬರುತ್ತದೆ. ಮಣ್ಣಿನಿಂದ ಹಾಗೂ ಬಾಹ್ಯವಾಗಿ ಬರುವ ಶಿಲೀಂಧ್ರ ಇತರೆ ರೋಗ ಕೀಟಗಳ ಹಾವಳಿ ನಿಯಂತ್ರಣದಲ್ಲಿರುತ್ತದೆ. ಈ ಎಲ್ಲ ಕಾರಣಗಳಿಂದ ಅಂತಿಮವಾಗಿ ಸಹಜವಾಗಿ ಇಳುವರಿಯೂ ಹೆಚ್ಚುತ್ತದೆ. ಹಾಗಾಗಿ ರೈತರು ಬೀಜೋಪಚಾರ ಮಾಡುವುದನ್ನು ಮರೆಯಬಾರದು’ ಎಂದರು.

ಸ್ವಲ್ಪ ಜಮೀನಿನಲ್ಲಾದರೂ ಸಿರಿಧಾನ್ಯ ಬೆಳೆಯಲು ರೈತರು ಆಸಕ್ತಿವಹಿಸಬೇಕು. ಸರ್ಕಾರದಿಂದ ದೊರೆಯುವ ಪ್ರೋತ್ಸಾಹಧನ ಬಳಕೆ ಮಾಡಿಕೊಳ್ಳಬೇಕು.
-ಅಜಮೀರ್‌ ಅಲಿ, ಬೆಟಗೇರಿ ಕೃಷಿ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.