ಅಳವಂಡಿ: ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತರೊಬ್ಬರು ಸಾವಯುವ ಕೃಷಿ ಮೂಲಕ ಪೇರಲ ಬೆಳೆದು ಬದುಕು ಕಟ್ಟಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಅಳವಂಡಿ ಸಮೀಪದ ಮೈನಹಳ್ಳಿ ಗ್ರಾಮದ ಈಶಪ್ಪ ಹಳ್ಳಿ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಪೇರಲೆ ಬೆಳೆದು ಉತ್ತಮ ಲಾಭ ಪಡೆಯುತ್ತಿದ್ದಾರೆ. ಮೊದಲು ತಮ್ಮ ಎರಡು ಎಕರೆಯ ಜಮೀನಿನಲ್ಲಿ ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. ಪರ್ಯಾಯವಾಗಿ ಏನಾದರೂ ಬೆಳೆಯಬೇಕು ಎಂದುಕೊಂಡ ಅವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಮಾರ್ಗದರ್ಶನ ಪಡೆದರು. ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪೇರಲ ಬೆಳೆಯಲು ಗ್ರಾ.ಪಂ ಮತ್ತು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದರು.
ಆಂಧ್ರಪ್ರದೇಶದ ರಾಜಮಂಡರಿ ನರ್ಸರಿಯಿಂದ ತೈವಾನ್ ಪಿಂಕ್ ತಳಿಯ 950 ಪೇರಲ ಸಸಿಗಳನ್ನು ಖರೀದಿಸಿ, ನಂತರ ಮೊದಲು ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಗೂ ಕುರಿಹಿಕ್ಕಿ ಗೊಬ್ಬರ ಹಾಕುವ ಮೂಲಕ ಜಮೀನು ಹದಗೊಳಿಸಿದರು. ಗುಂಡಿ ತೆಗೆದು ಸಸಿ ನಾಟಿ ಮಾಡಿದ್ದಾರೆ. ಸಾಲಿನಿಂದ ಸಾಲಿಗೆ 8 ಅಡಿ, ಗಿಡದಿಂದ ಗಿಡಕ್ಕೆ 7 ಅಡಿ ಅಂತರವಿದೆ.
ಈಶಪ್ಪ ಜಮೀನಿನಲ್ಲಿ ಇರುವ ಬೋರವೆಲ್‌ನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸಸಿ ನಾಟಿ ಒಂದು ವರ್ಷದ ನಂತರ ಪೇರಲೆ ಬೆಳೆ ಕೈಗೆ ಬಂದಿದ್ದು , ಇದರಿಂದ ಲಕ್ಷಾಂತರ ಲಾಭ ಗಳಿಸುತ್ತಿದ್ದಾರೆ. ಪೇರಲ ಬೆಳೆಗೆ ರೋಗ ಬಂದರೂ ಸೂಕ್ತ ಜಾಷಧಿ ಸಿಂಪಡಿಸಿದರೆ ರೋಗಮುಕ್ತವಾಗುತ್ತದೆ. ಪೇರಲ ಗಿಡಗಳಿಗೆ ಸಗಣಿ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೀವಾಮೃತ ತಯಾರಿಕೆ ಮಾಡಿ ಹಾಕಲಾಗುತ್ತದೆ.
ತಮ್ಮ ಜಮೀನಿನಲ್ಲಿ ಬೆಳೆದ ಪೇರಲ ಹಣ್ಣುಗಳನ್ನು ಬೆಳಗಾವಿ ಹಾಗೂ ಹೊಸಪೇಟೆ ಮಾರುಕಟ್ಟೆಗೆ ಮಾರಾಟಕ್ಕೆ ಕಳುಹಿಸುತ್ತಿದ್ದಾರೆ.ಅಲ್ಲದೆ ತೋಟಕ್ಕೆ ಬೇರೆ ವ್ಯಾಪಾರಿಗಳು ಬಂದು ಒಂದು ದರ ನಿಗದಿಗೊಳಿಸಿ ಖರೀದಿಸಿಕೊಂಡು ಹೊಗುತ್ತಾರೆ. ಇದರಿಂದ ಸಾಗಾಣಿಕೆ ವೆಚ್ಚ ಕೂಡ ಉಳಿಯುತ್ತದೆ.
‘ನರೇಗಾ ಯೋಜನೆಯಡಿ ಎರಡು ಎಕರೆಯಲ್ಲಿ, ಸಾವಯವ ಕೃಷಿ ಮೂಲಕ ಪೇರಲ ಬೆಳೆದಿದ್ದೇನೆ. ಪೇರಲ ಹಣ್ಣುಗಳು ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ತುಂಬಲು ಸಹಾಯಕಾರಿಯಾಗಿವೆ. ಪೇರಲ ಬೆಳೆಯುವ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಎರಡು ವರ್ಷ ಹಿಂದೆ ಸಸಿ ನಾಟಿ ಮಾಡಿದ್ದೆ. ಆರು ತಿಂಗಳಿನಿಂದ ಫಸಲು ಕೈಸೇರುತ್ತಿದೆ. ಇದುವರೆಗೆ ಖರ್ಚು ತೆಗೆದು ₹ 2 ಲಕ್ಷ ಲಾಭ ಆಗಿದೆ. ಇನ್ನೂ ಹೆಚ್ಚಿನ ಆದಾಯದ ನಿರೀಕ್ಷೆಯಿದೆ’ ಎನ್ನುತ್ತಾರೆ ರೈತ ಈಶಪ್ಪ ಹಳ್ಳಿ.
ಪೇರಲ ಹಣ್ಣು ಬೆಳೆಯಲು ತೋಟಗಾರಿಕೆ ಇಲಾಖೆ ಮತ್ತು ನರೇಗಾ ಯೋಜನೆಯಡಿ ಗ್ರಾ.ಪಂ ಅಧಿಕಾರಿಗಳು ಸಲಹೆ ಸಹಕಾರ ನೀಡಿದ್ದಾರೆ.ಈಶಪ್ಪ ಹಳ್ಳಿ ರೈತ
ತೋಟಗಾರಿಕೆ ಇಲಾಖೆ ಹಾಗೂ ನರೇಗಾ ಯೋಜನೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಮೈನಹಳ್ಳಿ ಗ್ರಾಮದ ರೈತ ಈಶಪ್ಪ ಹಳ್ಳಿ ಅವರು ಪೇರಲೆ ಬೆಳೆದು ಉತ್ತಮ ಆದಾಯ ಕಾಣುತ್ತಿದ್ದಾರೆ.ಬಸವರಾಜ ರಾಂಪೂರ ಸಹಾಯಕ ತೋಟಗಾರಿಕೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.