ಕನಕಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಬುಧವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಶಾಂತಮ್ಮ, ಅನ್ನಪೂರ್ಣಮ್ಮ ಹಾಗೂ ಕೋಶಾಧ್ಯಕ್ಷೆ ನೂರಜಹಾನ್ ಮಾತನಾಡಿ,‘ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಬಿಸಿಯೂಟ ಯೋಜನೆಯ ಕಾರ್ಯಕರ್ತರಿಗೆ ಸರ್ಕಾರ ವೇತನ ಹೆಚ್ಚಳ ಮಾಡದ ಕಾರಣ ಜೀವನ ಅಭದ್ರವಾಗಿದೆ. ಕೊರೊನಾ ಸಮಯದಲ್ಲಿ ಸರ್ಕಾರ ನಯಾಪೈಸೆ ಪ್ರೋತ್ಸಾಹ ಧನ ನೀಡಿಲ್ಲ’ ಎಂದು ತಿಳಿಸಿದರು.
ಅಕ್ಷರ ದಾಸೋಹ ಯೋಜನೆಯ ನೌಕರರು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಮಕ್ಕಳ ಸಂಖ್ಯೆ, ಅಡುಗೆ ಪದಾರ್ಥ ಹೆಚ್ಚಳ ಮಾಡಿದ್ದರೂ ವೇತನ ಹೆಚ್ಚಳ ಮಾಡಿಲ್ಲ ಎಂದು ದೂರಿದರು.
ಕೊರೊನಾ ಸಮಯದ ಏಪ್ರಿಲ್ ಹಾಗೂ ಮೇ ತಿಂಗಳ ವೇತನ ನೀಡಬೇಕು. ಬಿಸಿಯೂಟ ನೌಕರರು ಹಾಗೂ ಅವರ ಕುಟುಂಬ ವರ್ಗದವರಿಗೆ ಲಸಿಕೆ ನೀಡಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಿಐಟಿಯು ಅಧ್ಯಕ್ಷ ಮಲ್ಲಪ್ಪ, ಪ್ರಮುಖರಾದ ಅಲ್ಲಸಾ ಕೋರಿ, ಆನಂದಮ್ಮ, ದುರುಗಮ್ಮ, ಸುನೀತಾ, ಬಸಮ್ಮ , ಮಲ್ಲಮ್ಮ ಹಾಗು ಗಂಗಮ್ಮ ಇದ್ದರು. ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.