ADVERTISEMENT

ಅಳವಂಡಿ: ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 4:48 IST
Last Updated 21 ಫೆಬ್ರುವರಿ 2024, 4:48 IST
   

ಅಳವಂಡಿ: ಗ್ರಾಮದ ಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ ಬುಧವಾರ ಹಾಗೂ ಗುರುವಾರ ನಡೆಯಲಿದ್ದು, ಇಲ್ಲಿ ಸಂಭ್ರಮ ಮನೆ ಮಾಡಿದೆ. ತಯಾರಿಯ ಕೂಡ ಬಹುತೇಕ ಪೂರ್ಣಗೊಂಡಿದೆ.

ಗ್ರಾಮೀಣ ಸೊಗಡು ಬಿಂಬಿಸುವ ಜಾತ್ರೆ ಬಂತೆಂದರೆ ಸಾಕು ಇಲ್ಲಿನ ದೇವಸ್ಥಾನ, ಗೋಪುರ, ದ್ವಾರ ಬಾಗಿಲುಗಳಿಗೆ ತಳಿರು ತೋರಣಗಳಿಂದ ಸಿಂಗರಿಸಿ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಮಹಾರಥೋತ್ಸವಕ್ಕೆ ರಥವನ್ನು ಶೃಂಗರಿಸುವ ಕಾರ್ಯ ಭರದಿಂದ ಸಾಗಿದೆ.

ಸ್ಥಳೀಯ ಆಡಳಿತದ ವತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಗಿದ್ದು, ಜಾತ್ರೆಯ ಆಗಮಿಸುವ ಭಕ್ತರಿಗೆ ಎರಡು ದಿನಗಳ ಕಾಲ ನಿರಂತರವಾಗಿ ದಾಸೋಹ ನಡೆಯಲಿದೆ. ಮಹಾದಾಸೋಹಕ್ಕೆ ಭಕ್ತರಿಗೆ ದವಸ ಧಾನ್ಯ, ರೊಟ್ಪಿ ಸೇರಿದಂತೆ ಅನೇಕ ವಿವಿಧ ರೀತಿಯ ಖಾದ್ಯಗಳು ಮಠಕ್ಕೆ ಹರಿದು ಬರುತ್ತಿವೆ. ಮಂಗಳವಾರ ಕೂಡ ಸಿದ್ಧತೆ ಜೋರಾಗಿ ನಡೆಯುತ್ತಿದ್ದ ಚಿತ್ರಣ ಕಂಡು ಬಂದಿತು.

ADVERTISEMENT

ಮಠದಲ್ಲಿ ಪ್ರತಿ ಅಮಾವಾಸ್ಯೆ ದಿನದಂದು ವಿಶೇಷ ಪೂಜೆ, ಶಿವಾನುಭವ, ಯೋಗ ಶಿಕ್ಷಣ, ಪರಿಸರ ಹಾಗೂ ಆರೋಗ್ಯ ಜಾಗೃತಿ, ವೈದಿಕ ಸಂಸ್ಕಾರ ಶಿಬಿರ, ಶ್ರಾವಣ ಮಾಸದಲ್ಲಿ ಪುರಾಣ ಸೇರಿದಂತೆ ಅನೇಕ ಧಾರ್ಮಿಕ ಸಮಾರಂಭಗಳು ಜರುಗುತ್ತವೆ.

ಸಿದ್ದೇಶ್ವರ ಸ್ವಾಮಿಯನ್ನು ಪಟ್ಟಕ್ಕೆ ಕೂರಿಸುವುದು, ರಥವನ್ನು ಹೊರ ತರುವುದು, ಲಘು ರಥೋತ್ಸವ, ಸಿದ್ಧೇಶ್ವರ ಪಲ್ಲಕ್ಕಿ ಮೆರವಣಿಗೆ, ಗಂಗಾಪೂಜೆ ಸೇರಿದಂತೆ ಅನೇಕ ಧಾರ್ಮಿಕ ವಿಧಿವಿಧಾನಗಳು ನಡೆದಿವೆ.

ಬುಧವಾರ ಬೆಳಿಗ್ಗೆ ಸಿದ್ದೇಶ್ವರನಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ನಂತರ ಸರ್ವಧರ್ಮ ಸಾಮೂಹಿಕ ವಿವಾಹ, ಧರ್ಮ ಸಭೆ, ಸಂಜೆ ಸಿದ್ದೇಶ್ವರನ ಧ್ವಜ ಲಿಲಾವ್ ಕಾರ್ಯಕ್ರಮ, ಶ್ರೀಗಳಿಂದ ಹಾಗೂ ಮುಖ್ಯ ಅತಿಥಿಗಳಿಂದ ಧ್ವಜಾರೋಹಣ, ತದನಂತರ ಮಹಾರಥೋತ್ಸವ ಜರುಗಲಿದೆ.

22ರಂದು ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ, ಧರ್ಮಸಭೆ, ಕೃಷಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಕಡುಬಿನ ಕಾಳಗ ನಡೆಯಲಿದೆ. ರಾತ್ರಿ 9 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಎರಡೂ ದಿನ ಮಹಾದಾಸೋಹ ನಡೆಯಲಿದೆ.

ಅಳವಂಡಿಯ ಸಿದ್ದೇಶ್ವರ ಮಠ ತನ್ನದೇ ಆದ ಭವ್ಯ ಪರಂಪರೆ ಹೊಂದಿದೆ. ಸಿದ್ದೇಶ್ವರ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಈ ಮಠ ಅಪಾರ ಭಕ್ತ ಸಮೂಹ ಹೊಂದಿದೆ.
ಮೈಲಪ್ಪ.ಎಂ. ಮೇಗಳಮನಿ ಮಠದ ಭಕ್ತ
ಮಠ ವರ್ಷಪೂರ್ತಿ ಅನೇಕ ಧಾರ್ಮಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ನಮ್ಮೂರಿನ ಜಾತ್ರೆಯ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎನ್ನುವುದೇ ಎಲ್ಲರ ಆಶಯ
ಸಂತೋಷ ಭಜಂತ್ರಿ ಗ್ರಾಮಸ್ಥರು
ಅಳವಂಡಿ ಗ್ರಾಮ ಆಧ್ಯಾತ್ಮ ಕೃಷಿ ಹೋರಾಟದ ಮೂಲಕ ಭವ್ಯ ಇತಿಹಾಸ ಹೊಂದಿದೆ. ಇಲ್ಲಿನ ಮಠ ಪ್ರಸಿದ್ಧಿ ಪಡೆದಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವುದೇ ಪುಣ್ಯ.
ಮಂಜುನಾಥ ಅಂಬಿಗೇರ ಮಠದ ಭಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.