ಅಳವಂಡಿ: ಬಿತ್ತನೆಯೂ ಇಲ್ಲ, ಆರೈಕೆಯೂ ಇಲ್ಲದೇ ಮಳೆಯಾದಾಗ ನೈಸರ್ಗಿಕವಾಗಿ ಹಬ್ಬುವ ಬಳ್ಳಿಯಲ್ಲಿ ಬಿಡುವ ಕರ್ಚಿಕಾಯಿ ಹರಿಯುವ ಕಾಯಕ ಗ್ರಾಮೀಣ ಭಾಗದ ಮಹಿಳಾ ಕೃಷಿ ಕಾರ್ಮಿಕರಿಗೆ ಉದ್ಯೋಗದ ಜತೆಗೆ ಇದರಿಂದ ಉಪಜೀವನ ನಡೆಯಲು ಸಹಕಾರಿಯಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಎರೆಭೂಮಿ ಇದ್ದು , ನೈಸರ್ಗಿಕವಾಗಿ ಬೆಳೆಯುವ ಕರ್ಚಿಕಾಯಿ ಉತ್ತಮವಾಗಿ ಬಂದಿದೆ.ಹಲವು ಗ್ರಾಮಗಳ ಮಹಿಳಾ ಕಾರ್ಮಿಕರು ಪ್ರತಿನಿತ್ಯ ಕರ್ಚಿಕಾಯಿ ಹರಿಯಲು ಜಮೀನಿಗೆ ತೆರಳುತ್ತಾರೆ.
ಮುಂಗಾರು ಮಳೆಗೆ ಎರೆ ಭಾಗದ ಜಮೀನಿನಲ್ಲಿ ಕರ್ಚಿಕಾಯಿ ಬೆಳೆ ಉತ್ತಮವಾಗಿ ಬರಲಿದೆ. ಆದರೇ ಪ್ರಸ್ತುತ ವರ್ಷ ಮುಂಗಾರು ಮಳೆ ತಡವಾಗಿತ್ತು.ಅದರಲ್ಲೂ ಮುಂಗಾರು ಮಳೆ ಸಮೃಧ್ಧವಾಗಿ ಸುರಿದರೇ ಹುಲುಸಾಗಿ ಬೆಳೆದ ಕರ್ಚಿಕಾಯಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವರದಾನವಾಗಲಿದೆ. ಪ್ರತಿನಿತ್ಯ ಅಳವಂಡಿ ಭಾಗದ ಸುತ್ತ ಮುತ್ತಲಿನ ಹಳ್ಳಿಗಳ ಮಹಿಳಾ ಕೃಷಿ ಕಾರ್ಮಿಕರು ಬೆಳಗ್ಗೆಯಿಂದ ಸಂಜೆಯವರೆಗೆ ಹತ್ತಾರು ಕಿ.ಮೀ ಹೋಗಿ ಜಮೀನಿನಲ್ಲಿ ಹರಿದುಕೊಂಡು ಕರ್ಚಿಕಾಯಿ ಸಂಗ್ರಹಿಸುತ್ತಾರೆ. ಸಂಜೆ ಗ್ರಾಮಕ್ಕೆ ಬರುತ್ತಿದ್ದಂತೆ ನಗರ, ಪಟ್ಟಣದಿಂದ ಖರೀದಿದಾರರಿಗೆ ಕೆ.ಜಿ ಲೆಕ್ಕದಲ್ಲಿ ಮಾರಾಟಮಾಡುತ್ತಾರೆ. ಸ್ಥಳದಲ್ಲಿಯೇ ವ್ಯಾಪಾರಸ್ಥರು ಮಹಿಳೆಯರಿಗೆ ಹಣ ನೀಡುತ್ತಾರೆ. ಇದರಿಂದ ಆರ್ಥಿಕವಾಗಿ ಭದ್ರತೆ ಒದಗಿಸುತ್ತದೆ.
ನಗರದಲ್ಲಿ ಹೆಚ್ಚಿದ ಬೇಡಿಕೆ: ಕರ್ಚಿಕಾಯಿಗೆ ನಗರ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಬೆಳಗಾವಿ, ಹುಬ್ಬಳ್ಳಿ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿ ಮುಂತಾದ ನಗರಗಳಿಂದ ಖರೀದಿದಾರರು ಬರುತ್ತಾರೆ. ಪ್ರತಿ ಕೆಜಿ ಕರ್ಚಿಕಾಯಿಗೆ ₹80 –₹100 ಇದೆ. ಪ್ರತಿ ಮಹಿಳಾ ಕೃಷಿ ಕಾರ್ಮಿಕರು ದಿನಕ್ಕೆ 4-8 ಕೆ.ಜಿ ವರೆಗೂ ಕರ್ಚಿಕಾಯಿ ಹರಿದು ಸಂಗ್ರಹಿಸಿ ₹400–₹1000 ರೂಪಾಯಿ ಸಂಪಾದಿಸುವುದು ಸಾಮಾನ್ಯವಾಗಿದೆ.
ಕರ್ಚಿಕಾಯಿಯಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಬೆಟಕೆರಾಟಿನ್, ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಸಿ, ಫೈಬರ್ ಮತ್ತು ಸತುವು ಸೇರಿದಂತೆ ಮುಂತಾದ ಅನೇಕ ಪೋಷಕಾಂಶಗಳಿವೆ ಅನೇಕ ರೋಗ ನಿರೋಧಕ ಶಕ್ತಿಯನ್ನು ಕರ್ಚಿಕಾಯಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ದಿನಗಳಲ್ಲಿ ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಾರೆ.
ಮಹಿಳೆಯರು ಜಮೀನುಗಳಲ್ಲಿ ಹರಿದ ಕರ್ಚಿಕಾಯಿಗಳನ್ನು ಪ್ರತಿ ಕೆ.ಜಿಗೆ ₹80-₹100ನಂತೆ ಖರೀದಿಸಿ ಸಂಗ್ರಹಿಸಲಾಗುತ್ತದೆ. ಬಳಿಕ ಹೊಸಪೇಟೆ ಬಳ್ಳಾರಿ ಆಂದ್ರಪ್ರದೇಶ ಸೇರಿದಂತೆ ಅನೇಕ ನಗರ ಪ್ರದೇಶಗಳಿಗೆ ಕಳಿಸಲಾಗುತ್ತದೆಮಾಳವ್ವ, ಕೊಪ್ಪಳ ಮಧ್ಯವರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.