ADVERTISEMENT

ಬಹುಮುಖ ಪ್ರತಿಭೆಯ ಸಮೃದ್ಧಿ ಪಾಟೀಲ

ನಿಬ್ಬೆರುಗು ಉಂಟು ಮಾಡುವ ಪುಟ್ಟ ಬಾಲಕಿಯ ಕೌಶಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 6:43 IST
Last Updated 7 ಜುಲೈ 2024, 6:43 IST
ಸಮೃದ್ಧಿ ಪಾಟೀಲ್
ಸಮೃದ್ಧಿ ಪಾಟೀಲ್   

ಹನುಮಸಾಗರ: ಬೆರಗುಗೊಳಿಸುವ ಹುಲಾ ಹೂಪ್‌ ಕ್ರೀಡೆಯಲ್ಲಿ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಇಲ್ಲಿನ ಒಂಬತ್ತು ವರ್ಷದ ಬಾಲಕಿಯೊಬ್ಬಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಗಮನಸೆಳೆದಿದ್ದಾಳೆ.

ಹನುಮಸಾಗರದ ನಿವಾಸಿ ಪಕೀರಗೌಡ ಪಾಟೀಲ ಹಾಗೂ ಸುಜಾತ ಪಾಟೀಲ ದಂಪತಿಯ ಪುತ್ರಿಯಾದ ಸಮೃದ್ಧಿ ಪಾಟೀಲ ತನ್ನ ವಿಶೇಷ ಪ್ರತಿಭೆಯಿಂದ ಗುರುತಿಸಿಕೊಂಡವರು.

ಹುಲಾ ಹೂಪ್‌ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಮೃದ್ಧಿ ಪಾಟೀಲ, ಕಣ್ಣು ಮುಚ್ಚಿಕೊಂಡು ಬಣ್ಣಗಳನ್ನು ಗುರುತಿಸುವುದು ಹಾಗೂ ಚೆಸ್‌ ಆಡುವುದು ಹಾಗೂ ನೋಟಿನ ಸಂಖ್ಯೆಗಳನ್ನು ಕರಾರುವಕ್ಕಾಗಿ ಹೇಳುವುದು, ಕಣ್ಣುಮುಚ್ಚಿ ಬೈಸಿಕಲ್‌ ತುಳಿಯುವುದು ಸೇರಿ ತನ್ನ ಅಸಾಧಾರಣ ಪ್ರತಿಭೆಯಿಂದ ಗಮನಸೆಳೆದಿದ್ದಾಳೆ.

ADVERTISEMENT

ಏನಿದು ಹೂಲಾ ಹೂಪ್‌: ರಿಂಗ್‌ ಆಕಾರದ ಬಳೆಯನ್ನು ನಡುವಿನ ಬಳಿ ಹಾಕಿಕೊಂಡು ಚಾಕಚಕ್ಯತೆಯಿಂದ ವಿವಿಧ ಪ್ರಕಾರದ ಕಸರತ್ತುಗಳನ್ನು ಪ್ರದರ್ಶಿಸುವುದಾಗಿದೆ.

ತನ್ನ ಆರನೇ ವಯಸ್ಸಿನಲ್ಲಿ ಅಭ್ಯಾಸನಿರತಳಾಗಿರುವ ಸಮೃದ್ಧಿಪಾಟೀಲ, ಸಾಂಪ್ರದಾಯಿಕ ಪ್ರತಿಭೆಯ ಜತೆಗೆ ಅನನ್ಯ ಕೌಶಲಗಳನ್ನು ಬೆಳೆಸಿಕೊಂಡಿದ್ದಾಳೆ. ಸ್ಥಳೀಯವಾಗಿ ನಡೆದ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದಾಳೆ. ಇತ್ತೀಚೆಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ಈಕೆಯ ಸಾಧನೆಗೆ ಭಾರತೀಯ ಛಾತ್ರ ರತ್ನ ಪುರಸ್ಕಾರ ದೊರೆತಿದೆ. ಅಲ್ಲದೇ ಸ್ಥಳೀಯ ಸಂಘ ಸಂಸ್ಥೆಗಳು ಈ ಬಾಲ ಪ್ರತಿಭೆಯನ್ನು ಗೌರವಿಸಿವೆ.

ಗಾಂಧಾರ ಕಲೆಯಲ್ಲೂ ನಿಪುಣತೆ:

ಗಾಂಧಾರ ಕಲೆಯು ಭಾರತದ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿದೆ. ಕಣ್ಣು ಮುಚ್ಚಿಕೊಂಡು ವಸ್ತುಗಳನ್ನು ಗುರುತಿಸುವುದು ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇದರ ಪ್ರಮುಖ ಭಾಗ. ಬಾಲಕಿ ಸಮೃದ್ಧಿಯು ಈ ಕಲೆಯಲ್ಲಿಯೂ ನಿಪುಣತೆ ಹೊಂದಿದ್ದಾಳೆ.  

ಬುದ್ಧಿಮತ್ತೆಯ ಆಟವಾದ ಚೆಸ್ ಅನ್ನು ಸಾಮಾನ್ಯವಾಗಿ ಅವಲೋಕಿಸದೇ ಆಡುವುದು ಬಹಳ ಕಷ್ಟ. ಆದರೆ, ಸಮೃದ್ಧಿಯು ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚೆಸ್ ಆಡುತ್ತಾಳೆ.‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಣ್ಣಗಳನ್ನು ನಿಖರವಾಗಿ ಗುರುತಿಸುತ್ತಾಳೆ. ಬೈಸಿಕಲ್‌ ಸವಾರಿ ಮಾಡುತ್ತಾಳೆ. ಕರೆನ್ಸಿ ನೋಟಿನಲ್ಲಿರುವ ಕ್ರಮ ಸಂಖ್ಯೆಗಳನ್ನು ತಪ್ಪಿಲ್ಲದೇ ಹೇಳುತ್ತಾಳೆ.

‘ಸಮೃದ್ಧಿಯ ಚಾತುರ್ಯ ಮತ್ತು ಸಾಹಸಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿವೆ. ಆದರೆ ಗಾಂಧಾರ ಕಲೆಯಲ್ಲಿ ಹೆಚ್ಚಿನ ತರಬೇತಿ ಪಡೆಯಲು ಆಕೆಗೆ ಆರ್ಥಿಕ ನೆರವಿನ ಅಗತ್ಯವಿದೆ. ಹಾಗಾಗಿ ದಾನಿಗಳನ್ನು ಈಕೆಗೆ ನೆರವಾಗಿ ಅದ್ದುತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳುತ್ತಾರೆ ಸ್ಥಳೀಯರು.

‘ಸಮೃದ್ಧಿಗೆ ವಿಶೇಷ ತರಬೇತಿ, ಸ್ಪರ್ಧೆಗಳಲ್ಲಿ ಪ್ರವೇಶ ಶುಲ್ಕ, ಮತ್ತು ಪ್ರವಾಸ ಖರ್ಚುಗಳನ್ನು ಭರಿಸಲು ಕಷ್ಟವಾಗುತ್ತಿದೆ. ಇದರಿಂದ ಕೆಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಪೋಷಕರು ಅಸಹಾಯಕತೆ ವ್ಯಕ್ತಪಡಿಸಿದರು.

ಸಮೃದ್ಧಿ ಪಾಟೀಲ್
ನಮ್ಮ ಪುತ್ರಿಯ ಕನಸುಗಳನ್ನು ಸಾಕಾರಗೊಳಿಸಲು ಹಾಗೂ ಮತ್ತಷ್ಟು ಸಾಧನೆಗೆ ದಾನಿಗಳು ನೆರವಾಗಬೇಕು.
ಸುಜಾತ ಪಾಟೀಲ ಸಮೃದ್ಧಿ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.