ADVERTISEMENT

ಗಂಗಾವತಿ: ಕಿಷ್ಕಿಂಧೆ ಪ್ರದೇಶದ ಚರ್ಚೆಗೆ ದಾಖಲೆ ನೀಡುವ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 13:22 IST
Last Updated 6 ಏಪ್ರಿಲ್ 2024, 13:22 IST
   

ಗಂಗಾವತಿ: ಹನುಮ ಜನಿಸಿದ ನಾಡು ಹಾಗೂ ಕಿಷ್ಕಿಂಧೆ ಪ್ರದೇಶ ಯಾವುದು ಎನ್ನುವ ಚರ್ಚೆ ದೇಶದಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ತಾಲ್ಲೂಕಿನ ಆನೆಗೊಂದಿಯ ಕಡೆಬಾಗಿಲು ಬೆಟ್ಟದ ಮೇಲ್ಭಾಗದಲ್ಲಿ 1527ರ ವಿಜಯನಗರ ಕಾಲದ ಶಾಸನ ಪತ್ತೆಯಾಗಿದ್ದು ಈ ಚರ್ಚೆಗೆ ಮಹತ್ವದ ದಾಖಲೆ ಒದಗಿಸಿದೆ.

‘ಶಾಸನವು ಎಂಟು ಸಾಲುಗಳಲ್ಲಿದ್ದು, ಆನೆಗೊಂದಿಯ ಮಹಾಪ್ರಧಾನ ಲಕ್ಕಿಶೆಟ್ಟಿಯ ಮಗನಾದ ವಿಜಯನಾಥನು ಬೆಟ್ಟದ ಮೇಲಿನ ವೀರಭದ್ರ ದೇವರನ್ನು ಆರಾಧಿಸಿದ ಸಂಗತಿ ಬರೆಯಲಾಗಿದೆ. ಪ್ರಾಸಂಗಿಕವಾಗಿ ಆನೆಗೊಂದಿಯನ್ನು ಹಸ್ತಿನಾವತಿ ಎಂದು ಅದು ಪಂಚಕೋಶ ಮಧ್ಯದಲ್ಲಿತೆಂದು ಹೇಳಲಾಗಿದೆ. ಅದಕ್ಕೆ ಕಿಷ್ಕಿಂಧೆ ಪರ್ವತ ಎನ್ನುವ ಹೆಸರು ಕೂಡ ಇತ್ತು ಎಂದು ಉಲ್ಲೇಖಿಸಿರುವುದು ಗಮನಾರ್ಹ ಸಂಗತಿಯಾಗಿದೆ’ ಎಂದು ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ್ ಹೇಳಿದ್ದಾರೆ.

‘ಆನೆಗೊಂದಿಯೇ ರಾಮಾಯಣ ಕಾಲದ ಕಿಷ್ಕಿಂಧೆ ಎಂದು ಗುರುತಿಸಲು ನೇರವಾಗಿ ಆನೆಗೊಂದಿಯಲ್ಲಿ ಯಾವ ಶಾಸನಗಳು ದೊರೆತಿರಲಿಲ್ಲ. ದೇವಘಾಟ್ ಮತ್ತು ಹುಲಿಗಿಗಳ ಶಾಸನಗಳಲ್ಲಿ ಮಾತ್ರ ಕಿಷ್ಕಿಂಧೆ ಉಲ್ಲೇಖವಿತ್ತು. ಪ್ರಸ್ತುತ ಆನೆಗೊಂದಿಯ ಶಾಸನವೇ ಕಿಷ್ಕಿಂಧೆ ಪರ್ವತ ಎಂದು ಉಲ್ಲೇಖಿಸಿರುವುದು ಕಿಷ್ಕಿಂಧೆ ಮತ್ತು ಆಂಜನೇಯನ ಜನ್ಮಸ್ಥಳಗಳ ಬಗೆಗಿನ ವಾದ ವಿವಾದಗಳ ಸಂದರ್ಭದಲ್ಲಿ ಈ ಉಲ್ಲೇಖ ತುಂಬಾ ಮಹತ್ವ ಪಡೆದುಕೊಂಡಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳವೆಂದು ಗುರುತಿಸಲು ಈ ಶಾಸನ ಮತ್ತೊಂದು ದಾಖಲೆಯಾಗಿದೆ’ ಎಂದಿದ್ದಾರೆ.

ಗಂಗಾವತಿಯ ಕಿಷ್ಕಿಂಧೆ ಯುವ ಚಾರಣ ಬಳಗದ ಸದಸ್ಯರು ಬೆಟ್ಟಕ್ಕೆ ಚಾರಣ ಹೋದಾಗ ಈ ಶಾಸನ ಗಮನಿಸಿದ್ದಾರೆ. ಶಾಸನ ಶೋಧನೆ ಹಾಗೂ ಪ್ರತಿ ಮಾಡಿಕೊಳ್ಳುವಲ್ಲಿ ಚಾರಣ ಬಳಗದ ಹರ ನಾಯಕ್, ಸಂತೋಷ ಕುಂಬಾರ್, ಅರ್ಜುನ್ ಆರ್, ಮಂಜುನಾಥ್ ಇಂಡಿ, ವಿಜಯ್ ಬಳ್ಳಾರಿ, ಆನಂದ ಚೌಡಕಿ, ವೀರೇಶ್ ಡಗ್ಗಿ ನೆರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.