ಎನ್.ವಿಜಯ್
ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ತಳವಾರಗಟ್ಟದ ಸಮೀಪ ಉದ್ಯೋಗ ಖಾತ್ರಿ ಯೋಜನೆಯಡಿ ಮಾದರಿ ಉದ್ಯಾನ ನಿರ್ಮಿಸಲು ತಾಲ್ಲೂಕು ಪಂಚಾಯಿತಿ ಸಿದ್ಧತೆ ನಡೆಸಿದೆ.
ಉದ್ಯೋಗ ಖಾತ್ರಿಯಲ್ಲಿ ಸಾಮಾನ್ಯವಾಗಿ ರಸ್ತೆ, ಚರಂಡಿ, ಕೃಷಿ ಹೊಂಡ, ಬದುವುಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ.
ಆದರೆ ಆನೆಗೊಂದಿ ಸುತ್ತಮುತ್ತ ಸಾಕಷ್ಟು ಐತಿಹಾಸಿಕ ಸ್ಥಳಗಳು ಇರುವುದರಿಂದ, ಈ ಭಾಗದಲ್ಲಿ ಪ್ರವಾಸೋದ್ಯಮ ಹೆಚ್ಚಿಸಲು, ಮಾದರಿ ಉದ್ಯಾನ ನಿರ್ಮಿಸಲು ತಾ.ಪಂ ಮುಂದಾಗಿದೆ.
ಈಗಾಗಲೇ ಆನೆಗೊಂದಿ ಗ್ರಾ.ಪಂ ಸರ್ವೆ ನಂ 204 ತಳವಾರಗಟ್ಟ ಸಮೀಪದ ಒಂದು ಎಕರೆ ಆಸ್ತಿಯಲ್ಲಿ ಬೆಳೆದಿರುವ ಮುಳ್ಳು ಕಂಟಿಗಳನ್ನು ಜೆಸಿಬಿ ಮೂಲಕ ಸ್ವಚ್ಚಗೊಳಿಸಿ, ಸಮತಟ್ಟು ಭೂಮಿಯನ್ನಾಗಿ ಮಾಡಲಾಗಿದೆ.
ಈ ಉದ್ಯಾನ ನಿರ್ಮಾಣ ಕಾರ್ಯ ಶೀಘ್ರದಲ್ಲೆ ನಡೆಯಲಿದ್ದು, ಇದಕ್ಕೆ ನರೇಗಾದಡಿ ₹ 35 ಲಕ್ಷ ಹಾಗೂ ತಾ.ಪಂ ಮತ್ತು ಗ್ರಾ.ಪಂ ಸೇರಿ ₹ 5 ಲಕ್ಷ ಅನುದಾನ ನೀಡಲಿದೆ ಎಂದು ಇಓ ಡಾ.ಡಿ.ಮೋಹನ್ ಅವರು ಹೇಳಿದ್ದಾರೆ.
ಏನೆಲ್ಲ ನೋಡಬಹುದು: ಹಂಪಿ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಕಿಷ್ಕಿಂದಾ, ಋಷಿಮುಖ, ದುರ್ಗಾದೇವಿ ದೇವಸ್ಥಾನ, ಕಲ್ಲಿನ ಸೇತುವೆ, ಸಾಣಪುರ ಕೆರೆ, ಕೃಷ್ಣದೇವರಾಯ ಸಮಾಧಿ ಹಾಗೂ ಪುತ್ಥಳಿ, ನವವೃಂದಾವನ, ವಿಜಯನಗರ ಸಾಮ್ರಾಜ್ಯದ ಮಹಲ್, ಚಿಂತಾಮಣಿ, ಹುಚ್ಚಪ್ಪಯ್ಯಮಠ, ತಳವಾರಗಟ್ಟ, ಕರಕುಶಲ ವಸ್ತುಗಳ ತಯಾರಿಕೆ ಸ್ಥಳವನ್ನು ನೋಡಬಹುದು.
ಉದ್ಯಾನದ ವಿಶೇಷತೆ: ಉದ್ಯಾನದ ಸುತ್ತ ತಂತಿಯ ಫೆಂಚಿಂಗ್, ದ್ವಾರ ಬಾಗಿಲು, ವಿವಿಧ ಜಾತಿಯ ಗಿಡಗಳನ್ನು ಬೆಳೆಸುವುದು, ಹಸಿರು ಹುಲ್ಲುಹಾಸು, ಅಲಂಕಾರಿಕ ಗಿಡಗಳು, ನಡೆಯಲು ವಾಕಿಂಗ್ ಟ್ರಾಕ್, ಕೂಡಲು ಸಿಟ್ಟಿಂಗ್ ಚೆರ್ಸ್, ಕುಡಿಯುವ ನೀರು, ವಾಟರ್ ಪ್ಲೋ, ಚಿಣ್ಣರರಿಗೆ ಜೋಕಾಲಿ, ಜಾರುಬಂಡೆ, ಉಯ್ಯಾಲೆ, ಹಿರಿಯರಿಗೆ ವ್ಯಾಯಮ ಸಲಕರಣೆ ಸೌಲಭ್ಯ ಇರಲಿದೆ.
ಈ ಉದ್ಯಾನ ನಿರ್ಮಾಣದ ನಂತರ ಇದರ ನಿರ್ವಹಣೆಗಾಗಿ ಪಂಚಾಯಿತಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಉದ್ಯಾನದ ಸಮೀಪವೇ ತುಂಗಾಭದ್ರ ನದಿ ಇರುವುದರಿಂದ ಉದ್ಯಾನಕ್ಕೆ ನೀರಿನ ಕೊರತೆ ಇರುವುದಿಲ್ಲ. ಈಗಾಗಲೇ ಉದ್ಯಾನದ ಸಮೀಪ ಹೈಟೆಕ್ ಶೌಚಾಲಯ ನಿರ್ಮಾಣ ಆಗಿದ್ದು, ಪಾರ್ಕ್ ನಿರ್ಮಾಣದ ನಂತರ ಸಾರ್ವಜನಿಕರ ಬಳಕೆಗೆ ಅವಕಾಶ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.