ಗಂಗಾವತಿ (ಕೊಪ್ಪಳ ಜಿಲ್ಲೆ): ಆಧುನಿಕ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡ ಅವರು ಬಂಧನದಲ್ಲಿದ್ದ ಆನೆಗೊಂದಿಯ ಸೆರೆಮನೆ ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ನಡೆಸಿದ ನಿರಂತರ ಶೋಧನೆಯಿಂದಾಗಿ ಅಂತಿಮವಾಗಿ ಆನೆಗೊಂದಿಯ ಜಿಂಜರ ಬೆಟ್ಟದಲ್ಲಿ ಸೆರೆಮನೆ ಪತ್ತೆಯಾಗಿದೆ. ವಿಜಯನಗರ ಸಾಮ್ರಾಜ್ಯದ ನಿಷ್ಠಾವಂತ ಮಾಂಡಲಿಕನಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರು ಅಳಿಯ ರಾಮರಾಯನ ಕಾಲದಲ್ಲಿ ತನ್ನ ರಾಜ್ಯದಲ್ಲಿ ಉಂಟಾದ ಆರ್ಥಿಕ ದುಸ್ಥಿತಿ ಸುಧಾರಿಸಲು ಮತ್ತು ಪ್ರಜೆಗಳ ಹಿತರಕ್ಷಣೆಗಾಗಿ ಸಾಮ್ರಾಟನ ಅನುಮತಿ ಪಡೆಯದೆ ಬೈರೇಶ್ವರ ಹೆಸರಿನ ಸ್ವಂತ ನಾಣ್ಯಗಳನ್ನು ಚಲಾಯಿಸಿದನು. ಇದರಿಂದ ಕೆರಳಿದ ಅಳಿಯ ರಾಮರಾಯ ಕೆಂಪೇಗೌಡನನ್ನು ರಾಜಧಾನಿ ವಿಜಯನಗರದಲ್ಲಿ ಜರುಗುತ್ತಿದ್ದ ದಸರಾ ಉತ್ಸವಕ್ಕೆ ಆಹ್ವಾನಿಸಿ, ಬಂಧಿಸಿ ಆನೆಗೊಂದಿ ಸೆರೆಮನೆಗೆ ತಳ್ಳುತ್ತಾನೆ ಎಂದು ಅವರು ಹೇಳಿದ್ದಾರೆ.
ಕೆಂಪೇಗೌಡರು 1560ರಿಂದ ಐದು ವರ್ಷಗಳ ಕಾಲ ಆನೆಗೊಂದಿ ಸೆರೆಮನೆಯಲ್ಲಿದ್ದರು. ಪ್ರಸಕ್ತ ಶಕೆ 1565ರಲ್ಲಿ ಭಾರಿ ದಂಡ ತೆತ್ತು ಬಿಡುಗಡೆಗೊಂಡರು. ಈ ಸಂಗತಿಯನ್ನು ಮೈಸೂರ್ ಗ್ಯಾಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
ಕೆಂಪೇಗೌಡರು ಬಂಧನದಲ್ಲಿದ್ದ ಸೆರೆಮನೆ ಹುಡುಕಾಟ ನಡೆಸಲಾಗಿತ್ತು. ಆನೆಗೊಂದಿಯಲ್ಲಿ ಪ್ರಚಲಿತವಾಗಿರುವ ಮೌಖಿಕ ಹೇಳಿಕೆಗಳು ಕೆಂಪೇಗೌಡರು ಜಿಂಜರ ಬೆಟ್ಟದಲ್ಲಿ ಬಂಧನದಲ್ಲಿದ್ದರು ಎಂಬುದನ್ನು ಸೂಚಿಸುತ್ತಿದ್ದವು. ಆ ಮೌಖಿಕ ಮಾಹಿತಿ ಅನುಲಕ್ಷಿಸಿ ಬೆಟ್ಟವನ್ನು ಅಮೂಲಾಗ್ರವಾಗಿ ಪರಿಶೋಧಿಸಿದಾಗ ಬೆಟ್ಟದ ಮೇಲೆ ವಿಶಾಲವಾದ ಜಾಗದಲ್ಲಿ ಸುತ್ತಲೂ ರಕ್ಷಣಾ ಗೋಡೆಗಳು, ಅಲ್ಲಲ್ಲಿ ಕಾವಲು ಗೋಪುರಗಳು, ಕಾವಲುಗಾರರ ಮನೆಗಳು, ಸೈನಿಕರ ವಸತಿಗಳು, ಭದ್ರತಾ ಕಟ್ಟಡ (ಸೆರೆಮನೆ), ಕಣಜ ಮತ್ತು ನೈಸರ್ಗಿಕ ನೀರಿನ ಕೊಳಗಳು ಕಂಡು ಬಂದವು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.