ಆನೆಗೊಂದಿ (ಗಂಗಾವತಿ): ವಿಜಯನಗರ ಸಾಮ್ರಾಜ್ಯದ ಮೂಲ ಬೇರು ಹಾಗೂ ರಾಮಾಯಣ ಕಾಲದ ಐತಿಹ್ಯವಿರುವ ಆನೆಗೊಂದಿಯಲ್ಲಿ ಉತ್ಸವ ಆಯೋಜಿಸಿದ್ದರೂ ಸ್ಥಳೀಯ ಕಲಾವಿದರು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದಾಗ ಅದನ್ನು ನೋಡುವವರು ಯಾರೂ ಇರಲಿಲ್ಲ!
ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ಕನಕಗಿರಿ ಉತ್ಸವ ನಡೆದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಉತ್ಸವ ಆಯೋಜಿಸಿದ್ದು, ಅಧಿಕಾರಿಗಳು ಮತ್ತು ಜನರಲ್ಲಿ ಮೊದಲಿನ ಉತ್ಸಾಹ ಕಂಡು ಬರಲಿಲ್ಲ. ಶುಕ್ರವಾರದಿಂದ ಭಾನುವಾರದ ತನಕ ನಿರಂತರ ಮೂರು ದಿನ ರಜೆಯಿದ್ದರೂ ಹಲವು ಹಿರಿಯ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸ ಹೈರಾಣ ಮಾಡಿತ್ತು. ಸರ್ಕಾರವೇ ಉತ್ಸವ ಆಯೋಜಿಸಿದ್ದರಿಂದ ಅಧಿಕಾರಿಗಳು ತಮ್ಮ ಆಯಾಸವನ್ನೂ ಬದಿಗಿರಿಸಿ ಅನಿವಾರ್ಯವಾಗಿ ಕೆಲಸ ಮಾಡಿದರು.
ಇನ್ನೊಂದೆಡೆ ಉತ್ಸವದ ಶ್ರೀರಂಗದೇವರಾಯಲು ಮುಖ್ಯ ವೇದಿಕೆಯಲ್ಲಿ ಮಂಗಲವಾದ್ಯ, ತಬಲಾ ಸೊಲೊ, ಯೋಗ ನೃತ್ಯ, ಸುಗಮ ಸಂಗೀತ, ಜಾನಪದ ಸಂಗೀತ, ಸಮೂಹ ನೃತ್ಯ, ಕೊಳಲು ವಾದನ, ಯುಗಳ ಗೀತೆ, ನವೀನ ನೃತ್ಯ ಹೀಗೆ ಅನೇಕ ಕಾರ್ಯಕ್ರಮಗಳನ್ನು ಕಲಾವಿದರು ಪ್ರದರ್ಶನ ಮಾಡಿದರು. ಅವರ ಕಲಾ ಪ್ರತಿಭೆಗೆ ಸಾವಿರಾರು ಸಂಖ್ಯೆಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಗಳು ಮೂಕ ಸಾಕ್ಷಿಯಂತಿದ್ದವು.
ಪ್ರತಿ ಬಾರಿ ಉತ್ಸವ ನಡೆದಾಗಲೂ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತವೆ. ಆದರೆ ಉತ್ಸವ ಉದ್ಘಾಟನೆಯಾಗುವ ಮೊದಲೇ ಇವರ ಕಾರ್ಯಕ್ರಮಗಳು ನಡೆದಿದ್ದರಿಂದ ಜನರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಇತ್ತು. ವೀರೇಶ ಭಜಂತ್ರಿ, ಭಾಗ್ಯನಗರದ ಕುಮಾರೇಶ ಬಿನ್ನಾಳ, ಶಕುಂತಲಾ ಬಿನ್ನಾಳ ಸೇರಿದಂತೆ ಪ್ರಮುಖ ಕಲಾವಿದರ ಕಾರ್ಯಕ್ರಮಗಳಿದ್ದರೂ ಅದಕ್ಕೆ ತಕ್ಕ ಪ್ರಾಮುಖ್ಯತೆ ಲಭಿಸಲಿಲ್ಲ.
‘ಹೆಸರಿಗಷ್ಟೇ ಉತ್ಸವವಾಗುತ್ತಿದ್ದು, ಸ್ಥಳೀಯ ಕಲಾವಿದರಿಗೆ ಪ್ರಧಾನ ವೇದಿಕೆಯಲ್ಲಿ ಗಣ್ಯರ ಎದುರು ಕಲಾ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ. ಎಲ್ಲಿಯೇ ಉತ್ಸವ ನಡೆದರೂ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದೇವೆ. ಹೀಗಾದರೆ ನಾವು ಕುರ್ಚಿಗಾಗಿ ಕಲೆ ತೋರಿಸಬೇಕು’ ಎಂದು ಹೆಸರು ಹೇಳಲು ಬಯಸದ ಕಲಾವಿದರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
‘ನಾಲ್ಕು ವರ್ಷಗಳ ಬಳಿಕ ಉತ್ಸವ ನಡೆಯುತ್ತಿದೆ. ತಡವಾಗಿಯಾದರೂ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಬೇಕಿತ್ತು. ಆತುರದಲ್ಲಿ ಮಾಡುವ ಅವಸರವೇನಿತ್ತು’ ಎಂದು ಕಲಾವಿದರೊಬ್ಬರು ಪ್ರಶ್ನಿಸಿದರು.
ಚಾಲನೆ: ಗಗನ್ ಮಹಲ್ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ದೀಪಾಲಂಕಾರಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು.
ಗಗನ್ ಮಹಲ್ ಸೊಗಸಾದ ವೈಶಿಷ್ಟ್ಯಗಳು ಮತ್ತು ಪ್ರಾಚೀನ ಭಾರತದ ಗೋಡೆಗಳಾದ್ಯಂತ ವಿಸ್ತರಿಸುವ ಕಲಾಕೃತಿಗೆ ಹೆಸರಾಗಿದೆ. 15ನೇ ಶತಮಾನದಲ್ಲಿ ಕುಶಲ ಕರ್ಮಿಗಳು ಮತ್ತು ಎಂಜಿನಿಯರ್‌ಗಳು ಈ ಕಟ್ಟಡ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.