ಗಂಗಾವತಿ: ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ ನಂತರ ಅಂಜನಾದ್ರಿ ಬೆಟ್ಟಕ್ಕೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ದೇವಸ್ಥಾನದ ಬಳಿ ಭಕ್ತರ ಸಂಖ್ಯೆಗೆ ತಕ್ಕಂತೆ ಕುಡಿಯಲು ನೀರು, ಶೌಚಾಲಯ, ಬಸ್ ನಿಲ್ದಾಣ ಸೇರಿ ಅಗತ್ಯ ಸೌಕರ್ಯಗಳು ಇಲ್ಲದಂತಾಗಿದೆ.
ಹಿಂದೆ ಪ್ರತಿ ಶನಿವಾರ, ಭಾನುವಾರ ಅಂಜನಾದ್ರಿಗೆ 10-15 ಸಾವಿರ ಭಕ್ತರು ಬರುತ್ತಿದ್ದರು. ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ ನಂತರ 25 ಸಾವಿರಕ್ಕೂ ಹೆಚ್ಚು ಭಕ್ತರು ಅಂಜನಾದ್ರಿಗೆ ಬರುತ್ತಿದ್ದಾರೆ. ಭಕ್ತರಿಗೆ ಸುಸಜ್ಜಿತ ಸೌಲಭ್ಯ ಕಲ್ಪಿಸಬೇಕಾದ ತಾಲ್ಲೂಕು ಆಡಳಿತ ಅಂಜನಾದ್ರಿ ಅಭಿವೃದ್ಧಿ ನೆಪದಲ್ಲಿ ಕಣ್ಮುಚ್ಚಿ ಕುಳಿತಿದೆ.
ಮುಜರಾಯಿ ಇಲಾಖೆಗೆ ಒಳಪಟ್ಟ ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ಕಾಣಿಕೆ ರೂಪದಲ್ಲಿ ವರ್ಷಕ್ಕೆ ₹ 1.5 ಕೋಟಿ ಆದಾಯ ಬರುತ್ತಿದೆ. ಅಂಜನಾದ್ರಿ ಬಳಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ತಾಲ್ಲೂಕು ಆಡಳಿತ ಕಿಂಚಿತ್ತು ತಲೆ ಕೆಡಿಸಿಕೊಂಡಿಲ್ಲ.
ಕುಡಿಯುವ ನೀರಿನ ಕೊರತೆ
ಅಂಜನಾದ್ರಿ ಪಾರ್ಕಿಂಗ್ ಬಳಿನ ಶೌಚಾಲಯದ ಬಳಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ದುರ್ನಾತದಲ್ಲೇ ಅಂಜನಾದ್ರಿ ಬಳಿನ ಸಣ್ಣ-ಪುಟ್ಟ ವ್ಯಾಪಾರಸ್ಥರು, ಭಕ್ತರು ಕುಡಿಯಲು ನೀರು ಹಿಡಿಯಬೇಕು. ಇಲ್ಲಿ ಸಣ್ಣ ಪ್ರಮಾಣದ ನೀರಿನ ಟ್ಯಾಂಕ್ ಇದ್ದು ಅರ್ಧ ದಿನಕ್ಕೆ ನೀರು ಖಾಲಿಯಾಗುತ್ತವೆ.
ಇನ್ನೂ ಗುತ್ತಿಗೆದಾರರು ಸಂಜೆ 6ಕ್ಕೆ ನೀರು ಬಂದ್ ಮಾಡಿ ಮನೆಗೆ ಹೋಗುವುದರಿಂದ ಸಂಜೆ ತಡವಾಗಿ ಮನೆಗೆ ಹೋಗುವ ಭಕ್ತರಿಗೆ ಕುಡಿಯಲು ನೀರಿಲ್ಲ. ಸದ್ಯ ಸಾಣಾಪುರ ಕೆರೆಯಲ್ಲಿ ನೀರು ವಾಸನೆ ಬರುತ್ತಿರುವ ಕಾರಣ ನೀರಿನ ಪೂರೈಕೆ 3 ದಿನ ಸ್ಥಗಿತ ಮಾಡು ತ್ತಿದ್ದು, ಇನ್ನಷ್ಟು ಸಮಸ್ಯೆ ಹೆಚ್ಚಾಗಿದೆ.
ಶೌಚಾಲಯ ಸಮಸ್ಯೆ
ಅಂಜನಾದ್ರಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಪಾರ್ಕಿಂಗ್ ಸ್ಥಳದ ಬಳಿ ನಿರ್ಮಿಸಿದ ಶೌಚಾಲಯದಲ್ಲಿ 4 ಕೊಠಡಿಗಳಿವೆ. ಮಹಿಳೆಯರು ತುರ್ತು ಶೌಚಕ್ಕೆ ಹೋಗಬೇಕೆಂದರೆ ಬಯಲನ್ನು ಆಶ್ರಯಿಸಬೇಕಾಗಿದೆ. ಪಾರ್ಕಿಂಗ್ ಸ್ಥಳದ ಬಳಿ ಜನಸಂದಣಿ ಹೆಚ್ಚಿರುವ ಕಾರಣ ಮಹಿಳೆಯರು ಕಷ್ಟ ದೇವರೇ ಬಲ್ಲ.
ರಸ್ತೆ ವಿಸ್ತರಣೆ ಅಗತ್ಯ
ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಬೈಕ್, ಕಾರು, ಟ್ರ್ಯಾಕ್ಟರ್, ಕ್ರಷರ್, ಲಾರಿಗಳಲ್ಲಿ ಬರುತ್ತಿದ್ದು ವಾಹನ ನಿಲ್ಲಿಸಲು ಹೆಚ್ಚಿನ ಪಾರ್ಕಿಂಗ್ ಸ್ಥಳವಿಲ್ಲದೆ, ರಸ್ತೆ ಪಕ್ಕ ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರ ಸಮಸ್ಯೆಯಾಗುತ್ತಿದ್ದು, ರಸ್ತೆ ವಿಸ್ತರಣೆ ತುರ್ತಾಗಿ ನಡೆಯಬೇಕಾಗಿದೆ.
ಪಾರ್ಕಿಂಗ್ ಸ್ಥಳವು ಚಿಕ್ಕದಾಗಿದ್ದು, ಅದರ ವಿಸ್ತೀರ್ಣ ಹೆಚ್ಚಿಸಬೇಕಾಗಿದೆ. ಬಸ್ ನಿಲ್ದಾಣ, ಸೂಕ್ತ ತ್ಯಾಜ್ಯ ವಿಲೇವಾರಿ, ರಸ್ತೆಗೆ ವಾಹನ ನಿಲ್ಲಿಸದಂತೆ ಕ್ರಮದ ಜತೆಗೆ ಅಗತ್ಯ ಪೊಲೀಸ್ ಬಂದೋಬಸ್ತ್‌ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಕೆಲಸವಾಗಬೇಕು ಎಂದು ರಂಗಾಪುರ ಗ್ರಾಮದ ನಿವಾಸಿ ಸಾಯಿಕುಮಾರ ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.