ADVERTISEMENT

ಅಂಜನಾದ್ರಿ ಭೂ ಸ್ವಾಧೀನಕ್ಕೆ ಸಮೀಕ್ಷೆ: ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 18:44 IST
Last Updated 7 ಸೆಪ್ಟೆಂಬರ್ 2023, 18:44 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಪ್ರಸಿದ್ಧ ಅಂಜನಾದ್ರಿ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆಯ ಭಾಗವಾಗಿ ಗುರುವಾರ ರೈತರ ವಿರೋಧದ ನಡುವೆಯೇ ಸರ್ವೆ ಅಧಿಕಾರಿಗಳಿಂದ ಜಂಟಿ ಮಾಪನ ಸಮೀಕ್ಷೆ (ಜೆಎಂಸಿ) ನಡೆಯಿತು.

ಅಂಜನಾದ್ರಿ ಅಭಿವೃದ್ಧಿ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸಿದರು. ಆದರೂ ಅಧಿಕಾರಿಗಳು ಸಮೀಕ್ಷೆ ನಿಲ್ಲಿಸಲಿಲ್ಲ. ಅಂಜನಾದ್ರಿ ಸಮೀಪದ ಹನುಮನಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ಸಮೀಕ್ಷೆ ನಡೆಸಲಾಯಿತು.

‘ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ನೀಡಲು ವಿರೋಧಿಸಿ ಆರು ಜನ ರೈತರು ಕೋರ್ಟ್‌ ಮೊರೆ ಹೋಗಿದ್ದಾರೆ. ಆದರೂ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ’ ಎಂದು ರೈತ ಆರ್. ರಮೇಶಬಾಬು ಆರೋಪಿಸಿದ್ದಾರೆ.

ADVERTISEMENT

ಸಮೀಕ್ಷೆ ನಡೆಸುವ ಕುರಿತು ಜಿಲ್ಲಾಡಳಿತ ರೈತರಿಗೆ ನೋಟಿಸ್‌ ನೀಡಿದ್ದರೂ ಯಾರೂ ತೆಗೆದುಕೊಂಡಿಲ್ಲ. ಆದ್ದರಿಂದ ಅಧಿಕಾರಿಗಳು ಅಂಜನಾದ್ರಿ ಸುತ್ತಮುತ್ತಲಿನ ಊರುಗಳಾದ ರಾಂಪುರ, ಮಲ್ಲಾಪುರ ಹಾಗೂ ಚಿಕ್ಕರಾಂಪುರ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ನೋಟಿಸ್ ಅಂಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.