ADVERTISEMENT

ಕೊಪ್ಪಳ ಏತ ನೀರಾವರಿಗೆ ಮತ್ತೊಂದು ‘ವಿಘ್ನ’

ಎ.ನಾರಾಯಣರಾವ ಕುಲಕರ್ಣಿ
Published 7 ಸೆಪ್ಟೆಂಬರ್ 2024, 7:58 IST
Last Updated 7 ಸೆಪ್ಟೆಂಬರ್ 2024, 7:58 IST
ಕುಷ್ಟಗಿ ತಾಲ್ಲೂಕು ಕಲಾಲಬಂಡಿ ಬಳಿಯ ಡೆಲಿವರಿ( ಡಿಸಿ-3) ಚೇಂಬರ್‌
ಕುಷ್ಟಗಿ ತಾಲ್ಲೂಕು ಕಲಾಲಬಂಡಿ ಬಳಿಯ ಡೆಲಿವರಿ( ಡಿಸಿ-3) ಚೇಂಬರ್‌   

ಕುಷ್ಟಗಿ: ಕೃಷ್ಣಾ ನದಿ ತುಂಬಿ ಹರಿದರೆ ಈ ಭಾಗದ ಜನರಲ್ಲಿ ಸಂತಸ ಮನೆಮಾಡುತ್ತದೆ. ಕಾರಣವೆಂದರೆ ಕೃಷ್ಣಾ ಭಾಗ್ಯ ಜಲನಿಗಮ ಕೈಗೆತ್ತಿಕೊಂಡಿರುವ ಕೊಪ್ಪಳ ಏತ ನೀರಾರಿ ಯೋಜನೆಯಲ್ಲಿನ ಕೆರೆ ತುಂಬಿಸುವ ಉಪ ಯೋಜನೆಯಲ್ಲಿ ತಮ್ಮೂರಿನ ಕೆರೆಗಳೂ ಭರ್ತಿಯಾಗುತ್ತವೆ ಎಂಬ ಆಶಯ. ಆದರೆ ಯೋಜನೆಗೆ ಸಮಸ್ಯೆಗಳು ಸಾಲುಸಾಲಾಗಿ ಎದುರಾಗುತ್ತಿದ್ದು, ಯೋಜನೆ ಪೂರ್ಣಗೊಂಡಿಲ್ಲ.

ಜುಲೈನಲ್ಲಿ ಕೃಷ್ಣಾ ನದಿ ಉಕ್ಕಿ ಹರಿದು ಆಲಮಟ್ಟಿ ಜಲಾಶಯ ಭರ್ತಿಯಾಗಿ ಸಾಕಷ್ಟು ನೀರು ನದಿಗೆ ಹರಿದುಹೋಯಿತು. ಜುಲೈ 15ರಂದು ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸಬೇಕಿತ್ತು. ಆದರೆ 2 ತಿಂಗಳಾದರೂ ಇಲ್ಲಿಯ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಕೆರೆಗಳಿಗೆ ಕನಿಷ್ಠ ಕೃಷ್ಣಾ ನೀರು ಹರಿಸಿದ್ದರೆ ಅಂತರ್ಜಲ ಹೆಚ್ಚಳವಾಗುತ್ತಿತ್ತು ಎಂಬುದು ರೈತರ ಆಶಯವಾಗಿತ್ತು.

ಜುಲೈನಲ್ಲಿ ನೀರು ಹರಿಸಲು ಕೆಬಿಜೆಎನ್‌ಎಲ್‌ ಮುಂದಾದರೂ ಮುದೂಟಗಿ ಬಳಿ, ಬಲಕುಂದಿ ಬಳಿಯ ಮುಖ್ಯ ಕೊಳವೆಗಳು ಒಡೆದಿದ್ದರಿಂದ ತೊಡಕಾಗಿತ್ತು. ನಂತರ ನೀರು ಹರಿಸಬೇಕು ಎನ್ನುವಷ್ಟರಲ್ಲಿ ಭೂ ಸ್ವಾಧೀನ ಪರಿಹಾರ ಬಂದಿಲ್ಲ ಎಂಬ ಕಾರಣಕ್ಕೆ ಕಲಾಲಬಂಡಿ, ಮುದೂಟಗಿ ರೈತರು ಪಂಪ್‌ಹೌಸ್‌ಗಳಿಗೆ ಕೀಲಿಹಾಕಿದ್ದರು. ಮನವೊಲಿಕೆ ನಂತರ ಮತ್ತೆ ನೀರು ಹರಿಸಬೇಕೆಂದರೆ ಜುಲೈ 31ಕ್ಕೆ ಮತ್ತೆ ಮುದೂಟಗಿ ಬಳಿ ಕೊಳವೆಯಲ್ಲಿ ಸೋರಿಕೆ ಉಂಟಾಗಿತ್ತು. ಅದೂ ದುರಸ್ತೆಯಾಗಿ ಪಂಪ್‌ಗಳನ್ನು ಚಾಲು ಮಾಡುವಷ್ಟರಲ್ಲಿ ಇಳಕಲ್‌ ತಾಲ್ಲೂಕಿನ ಬಲಕುಂದಿ ಪಂಪ್‌ಹೌಸ್‌ ಬಳಿ ಸ್ಥಾಪಿಸಿರುವ 25 ಎಂವಿಎ ಸಾಮರ್ಥ್ಯದ ಪರಿವರ್ತಕ ಸುಟ್ಟಿದೆ. ಅಲ್ಲದೆ ಅದಕ್ಕೂ ಮೊದಲೇ (ಜುಲೈ 18) ಹೆಚ್ಚುವರಿಯಾಗಿರುವ (ಸ್ಟ್ಯಾಂಡ್‌ಬೈ) ಪರಿವರ್ತಕ ಸುಟ್ಟಿತ್ತು. ಆದರೆ ಅದರ ದುರಸ್ತಿಗೆ ಕೆಬಿಜೆಎನ್‌ಎಲ್‌ ಮತ್ತು ಗುತ್ತಿಗೆದಾರ ಪ್ರಯತ್ನಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ADVERTISEMENT

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕುಗಳಿಗೆ ಸೇರಿದ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಕುಷ್ಟಗಿಯ 18 ಹಾಗೂ ಯಲಬುರ್ಗಾ 10 ಕೆರೆಗಳು ಸದ್ಯ ನೀರು ತುಂಬಿಸುವುದಕ್ಕೆ ಸಿದ್ಧಗೊಂಡಿವೆ. ಹೀಗೆ ಏನಾದರೊಂದು ಸಮಸ್ಯೆ ತಲೆದೋರುತ್ತಿದ್ದು ಕೆರೆಗಳಿಗೆ ನೀರು ಬರುತ್ತದೆಯೋ ಇಲ್ಲವೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮುತುವರ್ಜಿ ವಹಿಸಿ, ಮೊದಲು ಸುಟ್ಟಿದ್ದ ಪರಿವರ್ತಕ ದುರಸ್ತಿಗೊಳಿಸಿದ್ದರೆ, ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅದರಲ್ಲಿ ಯೋಜನೆಯ ಗುತ್ತಿಗೆದಾರ ಮತ್ತು ಕೆಬಿಜೆಎನ್‌ಎಲ್‌ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ ಎಂಬ ಅಸಮಾಧಾನ ಕಲಾಲಬಂಡಿ, ಮುದೂಟಗಿ ರೈತರಾದ ವೀರೇಶ, ಬಸವರಾಜ ಪಾಟೀಲ ಇತರರು ದೂರಿದರು.

ಒಂದು ಪರಿವರ್ತಕ ಸುಟ್ಟರೆ ಅದನ್ನು ಸ್ಥಳಾಂತರಿಸಿ ದುರಸ್ತಿಗೊಳಿಸಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಸುಮಾರು 25 ಸಾವಿರ ಕೆ.ಜಿ. ವೈಂಡಿಂಗ್ ತಂತಿ ಮತ್ತು 23 ಸಾವಿರ ಲೀಟರ್ ಆಯಿಲ್‌ ಹಾಕಬೇಕು. ದುರಸ್ತಿ ಹೊಣೆ ಗುತ್ತಿಗೆದಾರ ಜಿ.ಶಂಕರ ಅವರಿಗೆ ಸೇರಿದ್ದು, ಹೊಸಪೇಟೆಯಲ್ಲಿ ಪರಿವರ್ತಕಗಳ ದುರಸ್ತಿ ಕೆಲಸ ನಡೆಯುತ್ತಿದೆ. ಕೆಬಿಜೆಎನ್‌ಎಲ್‌ ಎಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಎಲ್ಲ ಪ್ರಕ್ರಿಯೆ ಮುಗಿದು ಸೆಪ್ಟೆಂಬರ್‌ ೨೫ರೊಳಗೆ ಪರಿವರ್ತಕ ಬಲಕುಂದಿಗೆ ಬರಲಿವೆ ಎಂದು ನಿಗಮದ ಮೂಲಗಳು ತಿಳಿಸಿವೆ.

ನೀರಿನ ಹರಿವು ಎಲ್ಲೆಲ್ಲಿ..

ಹುನಗುಂದ ತಾಲ್ಲೂಕು ಮುರೋಳದಿಂದ ಯೋಜನೆ ಆರಂಭವಾಗಿದ್ದು ಅಲ್ಲಿಂದ 20 ಕಿ.ಮೀ. ದೂರದ ಹುನಗುಂದ ಬಳಿಯ ಡೆಲಿವರಿ ಚೇಂಬರ್ (ಡಿ.ಸಿ-2) ಅಲ್ಲಿಂದ ಬಲಕುಂದಿ ವರೆಗಿನ 10 ಕಿ.ಮೀ. ತೆರೆದ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಬಲಕುಂದಿಯಿಂದ  ಮುದೂಟಗಿ(ಡಿ.ಸಿ-2) ಮತ್ತು ಕಲಾಲಂಬಂಡಿ (ಡಿಸಿ-3)ವರೆಗೆ ಬರುವ ನೀರನ್ನು ಯಲಬುರ್ಗಾ ತಾಲ್ಲೂಕುಗಳಿಗೆ ಹರಿಸಲಾಗುತ್ತದೆ.

ತಾಳೆಯಾಗದ ಎಂಜಿನಿಯರ್‌ಗಳ ಹೇಳಿಕೆ ಪದೇ ಪದೇ ಎದುರಾಗುತ್ತಿರುವ ಅಡ್ಡಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷ್ಣಾ ಭಾಗ್ಯ ಜಲ ನಿಗಮ ನಾರಾಯಣಪುರದ ಮುಖ್ಯ ಎಂಜಿನಿಯರ್ ಆರ್‌.ಮಂಜುನಾಥ್ ‘ಸಿಡಿಲಿಗೆ 25 ಎಂವಿಎ ಸಾಮರ್ಥ್ಯದ ಎರಡೂ ಟಿಸಿಗಳು ಏಕಕಾಲಕ್ಕೆ ಹಾಳಾಗಿದ್ದು ಗಮನಕ್ಕೆ ಬಂದಿತ್ತು. ವೈಂಡಿಂಗ್ ಮತ್ತಿತರ ತಾಂತ್ರಿಕ ಕೆಲಸಗಳು ಹೊಸಪೇಟೆಯಲ್ಲಿ ಹಗಲು ರಾತ್ರಿ ನಡೆಯುತ್ತಿವೆ. ಈ ತಿಂಗಳ 25ರೊಳಗೆ ಟಿಸಿ ಬಲಕುಂದಿಗೆ ಬರಲಿವೆ. ಅಲ್ಲದೆ ಕೆರೆ ತುಂಬಿಸುವ ಯೋಜನೆ ಸದ್ಯ ಪ್ರಾಯೋಗಿಕ ಆಗಿರುವುದರಿಂದ ಆರಂಭದಲ್ಲಿ ಇಂತಹ ಸಮಸ್ಯೆಗಳು ಬರುವುದು ಸಹಜ. ಬೇರೆ ಸಮಸ್ಯೆ ಇಲ್ಲದ ಕಾರಣ ಕೆರೆಗಳಿಗೆ ನೀರು ಹರಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದರು. ಆದರೆ ನಿಗಮದ ಮೂಲಗಳು ಮತ್ತು ಮುಖ್ಯ ಎಂಜಿನಿಯರ್ ಹೇಳಿಕೆಗಳಿಗೆ ತಾಳೆಯಾಗುತ್ತಿಲ್ಲ. ಜು.18ಕ್ಕೆ ಮೊದಲ ಟಿಸಿ ಸುಟ್ಟಿದೆ ಎಂಬ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.